Advertisement

ಕದನ ವಿರಾಮ ಉಲ್ಲಂಘನೆ: ಯೋಧ ಹುತಾತ್ಮ

12:30 AM Mar 22, 2019 | Team Udayavani |

ಜಮ್ಮು/ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿ ಸಿ ಗುಂಡು ಹಾರಿಸಿದ್ದರ ಪರಿಣಾಮ ಯೋಧ ಹುತಾತ್ಮರಾಗಿದ್ದಾರೆ.ಗುರುವಾರ ಬೆಳಗಿನ ಜಾವ ಸುಂದರ್‌ಬನಿ ವಲಯದಲ್ಲಿ ಈ ಘಟನೆ ನಡೆದಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಹುತಾತ್ಮ ಯೋಧರನ್ನು ಉಧಂಪುರ ಜಿಲ್ಲೆಯ ಯಶ್‌ಪಾಲ್‌ (24) ಎಂದು ಗುರುತಿಸಲಾಗಿದೆ. ನೌಶೇರಾ ವಲಯದಲ್ಲಿಯೂ ಕೂಡ ಗುರುವಾರ ಮಧ್ಯಾಹ್ನ ಕದನ ವಿರಾಮ ಉಲ್ಲಂಘನೆಯಾಗಿದೆ. ಎರಡೂ ಸ್ಥಳಗಳಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ ಎಂದು ಶ್ರೀನಗರದಲ್ಲಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ವರ್ಷದ ಜನವರಿಯಿಂದ ಈಚೆಗೆ 110 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. 2018ರಲ್ಲಿ ಒಟ್ಟು 2,936 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ.

ಐವರು ನಾಗರಿಕರ ರಕ್ಷಣೆ: ಇದೇ ವೇಳೆ ಕಣಿವೆ ರಾಜ್ಯದ ಹಜಿನ್‌, ಬಾರಾಮುಲ್ಲಾ, ಬಂಡೀಪುರಗಳಲ್ಲಿ ಎನ್‌ಕೌಂಟರ್‌ ನಡೆದಿದೆ. ಈ ಪೈಕಿ ಹಜಿನ್‌ನಲ್ಲಿ ಉಗ್ರರು ಐವರು ನಾಗರಿಕರನ್ನು  ಹಿಡಿದಿಟ್ಟುಕೊಂಡಿದ್ದರು. ಸೇನಾ ಪಡೆ ನಡೆಸಿದ ಬಿರುಸಿನ ಕಾರ್ಯಾಚರಣೆಯಲ್ಲಿ ಅವರನ್ನು ಪಾರು ಮಾಡಲಾಗಿದೆ. ಜತೆಗೆ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ.

ಮತ್ತೂಂದು ದಾಳಿ ನಡೆದರೆ ಎಚ್ಚರ
ಭಾರತದ ಮೇಲೆ ಮತ್ತಷ್ಟು ಭಯೋತ್ಪಾದನಾ ದಾಳಿ ನಡೆದರೆ ಪಾಕಿಸ್ಥಾನದ ಮೇಲೆ ಕಠಿನ ನಿಲುವು ಕೈಗೊಳ್ಳಬೇಕಾದೀತು. ಜತೆಗೆ ಹಿಂದಿನ ಸಮಯದಂತೆ ಪ್ರತಿಕ್ರಿಯೆ ಇರಲಿಕ್ಕಿಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಉಗ್ರ ಸಂಘಟನೆಗಳಾಗಿರುವ ಲಷ್ಕರ್‌-ಎ-ತೊಯ್ಬಾ ಮತ್ತು ಜೈಶ್‌-ಎ-ಮೊಹಮ್ಮದ್‌ ವಿರುದ್ಧ ಕರಾರುವಾಕ್ಕಾಗಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಶ್ವೇತಭವನದ ಹಿರಿಯ ಅಧಿಕಾರಿ ಈ ಮಾತುಗಳನ್ನಾಡಿದ್ದಾರೆ. ಮತ್ತೂಮ್ಮೆ ಫೆ.14ರ ಮಾದರಿಯ ಘಟನೆಗಳು ನಡೆದರೆ ಮತ್ತೆ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಇದರ ಜತೆಗೆ ಪಾಕಿಸ್ಥಾನದ ಕ್ರಮಗಳನ್ನು ತಡೆಹಿಡಿಯುವ ಹೊಣೆ ಚೀನಕ್ಕೆ ಇದೆ ಎಂದು ಅಮೆರಿಕ ತಿಳಿಸಿದೆ.
 
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಉಗ್ರ ನಿಗ್ರಹ ವಿಚಾರ ದಲ್ಲಿ ಷರತ್ತುಗಳನ್ನು ಮುಂದಿಟ್ಟುಕೊಂಡು ಶಾಂಘೈ ಸಹಕಾರ ಒಕ್ಕೂಟದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸಂಘಟ ನೆಯ ನೂತನ ಕಾರ್ಯದರ್ಶಿ ವ್ಲಾಡಿಮಿರ್‌ ನೊರೊವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next