Advertisement
ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತಾಗಿ ರೈತರಿಗೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡವು ಮಂಗಳವಾರ ಅಧ್ಯಯನ ಕೈಗೊಂಡಿತು. ಸಿಂದಗಿ ತಾಲೂಕಿನ ವಿರಕ್ತಮಠ, ಪಡಗಾನೂರ, ನಾಗಠಾಣ ಕ್ಷೇತ್ರದ ಹಡಗಲಿ ಗ್ರಾಮಕ್ಕೆ ಶಾಸಕರಾದ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ ಹಾಗೂ ಇತರ ನಾಯಕರು ಭೇಟಿ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಡಿಸಿ ಟಿ.ಭೂ ಬಾಲನ್ ಅವರೊಂದಿಗೆ ಸಭೆ ನಡೆಸಿ, ಜಿಲ್ಲೆಯ ವಕ್ಫ್ ಆಸ್ತಿ ಹಾಗೂ ನೋಟಿಸ್‌ಗಳ ಬಗ್ಗೆ ಮಾಹಿತಿ ಪಡೆದರು. ಸಂಜೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.ಕಾನೂನಿಗೆ ದ್ರೋಹ ಮಾಡುವ ಕೆಲಸ:
ಜಿಲ್ಲಾಧಿಕಾರಿ ಜೊತೆಗಿನ ಸಭೆ ಬಳಿಕ ಮಾತನಾಡಿದ ಕಾರಜೋಳ, ಲೋಕಸಭೆಯಲ್ಲಿ ಆ.8ರಂದು ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ. ಈಗ ಜಂಟಿ ಸಂಸದೀಯ ಸಮಿತಿಯಲ್ಲಿ 21 ಮಂದಿ ಲೋಕಸಭೆ ಸದಸ್ಯರು, 10 ರಾಜ್ಯಸಭಾ ಸದಸ್ಯರಿದ್ದಾರೆ. ಇದರಲ್ಲಿ ಎಲ್ಲ ಪಕ್ಷದವರು, ಜಾತಿ, ಧರ್ಮದವರೂ ಇದ್ದು, ಚರ್ಚೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಅನಾಹುತ ಮಾಡಿದೆ. ಇದು ಹಕ್ಕುಚ್ಯುತಿಯಾಗುತ್ತದೆ. ಅಲ್ಲದೇ, ವಿಷಯ ಚರ್ಚೆಗೆ ಬಂದು, ಮಸೂದೆ ಮಂಡಿಸಿದ ಸಮಯದಲ್ಲಿ ವಿಷಯ ಕೈಗೆತ್ತಿಕೊಂಡು ಕರ್ನಾಟಕ ಸರ್ಕಾರ ಕಾನೂನಿಗೆ ದ್ರೋಹ ಮಾಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಪಹಣಿಗಳನ್ನೂ ತಿದ್ದುಪಡಿ ಮಾಡಲು ಹೊರಟಿದೆ. ಆದ್ದರಿಂದ ಕೂಡಲೇ ವಕ್ಫ್ ಚಟುವಟಿಕೆಗಳ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತು ಪರಿಶೀಲನೆ ವೇಳೆ ದೊಡ್ಡ ಆಘಾತ ಎದುರಾಗಿದೆ. ಸಿಂದಗಿಯ 12ನೇ ಶತಮಾನದ ವಿರಕ್ತಮಠದ ಆಸ್ತಿಯೂ ವಕ್ಫ್ ಆಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ, ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಇಷ್ಟೇ ಅಲ್ಲ, ಪಡಗಾನೂರ ಗ್ರಾಮದ ರ‍್ವೆ ನಂ.220ರಲ್ಲಿ ಚಾಲುಕ್ಯ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೂ ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕಾರಜೋಳ ಹೇಳಿದರು.
Related Articles
Advertisement