Advertisement

Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ

06:04 AM Nov 01, 2024 | Team Udayavani |

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್‌ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದೆಂಬ ಭೀತಿಯಿಂದ ಉದ್ರಿಕ್ತರ ಗುಂಪು ಬುಧವಾರ ರಾತ್ರಿ ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 32 ಜನರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್‌ ರಫಿ ಅವರ ಮನೆ ಮೇಲೆ ಕಲ್ಲು ತೂರಿದ್ದಲ್ಲದೆ ಮನೆ ಮುಂದೆ ಇದ್ದ ಬೈಕನ್ನು ಜಖಂಗೊಳಿಸಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ ಬುಧವಾರ ರಾತೋರಾತ್ರಿ ಜಿಲ್ಲಾಧಿಕಾರಿ ಡಾ| ವಿಜಯ ಮಹಾಂತೇಶ ದಾನಮ್ಮನವರ, ಪೊಲೀಸ್‌ ವರಿಷ್ಠಾಧಿಕಾರಿ ಅಂಶು ಕುಮಾರ್‌ ಕಡಕೋಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು.

32 ಮಂದಿ ವಶಕ್ಕೆ
ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದವರಿಂದಲೂ ಮಾಹಿತಿ ಪಡೆದು ದೂರು ಸ್ವೀಕರಿಸಲಾಗುತ್ತಿದೆ. ಈವರೆಗೆ 32 ಜನರನ್ನು ವಶಕ್ಕೆ ಪಡೆದಿದ್ದು, ಅವರಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಗ್ರಾಮದಲ್ಲಿ ಬಿಗಿ ಭದ್ರತೆಗೆ 4 ಕೆಎಸ್‌ಆರ್‌ಪಿ ತುಕಡಿ, 200 ಪೊಲೀಸ್‌ ಸಿಬಂದಿ ನಿಯೋಜಿಸಲಾಗಿದೆ. 6 ಜನ ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಅಂಶುಕುಮಾರ್‌ ತಿಳಿಸಿದ್ದಾರೆ.

“ವೈಯಕ್ತಿಕವಾಗಿ ಯಾರಿಗೂ ನಾವು ನೋಟಿಸ್‌ ಕೊಟ್ಟಿರಲಿಲ್ಲ. ಹಿಂದೆ ಇದ್ದ ಪಟ್ಟಿ ಮೇಲೆ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ವಕ್ಫ್  ಆಸ್ತಿ ಎಂದು ಮನೆ ದಾಖಲೆಗಳಲ್ಲೂ ನಮೂದಿಸುತ್ತಾರೆಂದು ಜನ ಭಯಗೊಂಡು ಗಲಾಟೆ ಮಾಡಿದ್ದಾರೆ. ಈಗ ಪರಿಸ್ಥಿತಿ ತಿಳಿಯಾಗಿದೆ.” – ಡಾ| ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next