ಹೊಸದಿಲ್ಲಿ:ಹಿಂದೂಗಳ ನಡುವೆ ನಮಾಜ್ ಮಾಡಿದ್ದು ನನಗೆ ತುಂಬಾ ವಿಶೇಷವಾಗಿತ್ತು ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಬುಧವಾರ ತನ್ನ ವಿವಾದಕ್ಕೆ ಗುರಿಯಾಗಿದ್ದ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.
ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ ಬಳಿಕ ವಕಾರ್ ಯೂನಿಸ್ , ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ”ಬಾಬರ್ ಮತ್ತು ರಿಜ್ವಾನ್ ಬ್ಯಾಟಿಂಗ್ ಮಾಡಿದ ರೀತಿ, ಸ್ಟ್ರೈಕ್-ರೊಟೇಶನ್, ಅವರ ಮುಖದ ನೋಟ ಅದ್ಭುತವಾಗಿತ್ತು..ಮಾಶಲ್ಲಾ, ರಿಜ್ವಾನ್ ಹಿಂದೂಗಳಿಂದ ಸುತ್ತುವರಿದ ಮೈದಾನದಲ್ಲಿ ನಮಾಜ್ ಮಾಡಿದನು, ಅದು ನಿಜವಾಗಿಯೂ ನನಗೆ ತುಂಬಾ ವಿಶೇಷವಾಗಿತ್ತು” ಎಂದಿದ್ದರು.
ಇದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ , ”ಇದನ್ನು ಕ್ರೀಡೆಯಲ್ಲಿ ಹೇಳಲು ಜಿಹಾದಿ ಮನಸ್ಥಿತಿಯ ಮತ್ತೊಂದು ಹಂತ ತೋರುತ್ತಿದೆ. ಎಂತಹ ನಾಚಿಕೆಗೇಡಿನ ಮನುಷ್ಯ” ಎಂದು ಕಿಡಿ ಕಾರಿದ್ದರು.
”ವಕಾರ್ ಯೂನಿಸ್ ಹೇಳಿದ್ದು, ನಾನು ಕೇಳಿದ ಅತ್ಯಂತ ನಿರಾಶಾದಾಯಕ ಸಂಗತಿಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಬಹಳಷ್ಟು ಜನರು ಇಂತಹ ವಿಷಯಗಳನ್ನು ಕಡಿಮೆ ಮಾಡಲು ಮತ್ತು ಕ್ರೀಡೆಯ ಬಗ್ಗೆ ಮಾತನಾಡಲು ಕಷ್ಟಪಡುತ್ತಾರೆ ಮತ್ತು ಇದನ್ನು ಕೇಳುವುದು ಭಯಾನಕವಾಗಿದೆ” ಎಂದು ಕ್ರಿಕೆಟ್ ವಿಮರ್ಶಕ ಹರ್ಷ ಭೋಗ್ಲೆ ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ ಎದುರಿಸಿದ ನಂತರ, ವಕಾರ್, ಬುಧವಾರ ತನ್ನ ಅವಹೇಳನಕಾರಿ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.