ಶ್ರೀನಗರ: ”ನಮ್ಮ ಸರಕಾರವು ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಮತದಾನದ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ.ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಎರಡೂ ವಿಭಾಗಗಳ ಜನರ ಮುಖದಲ್ಲಿ ಮತ್ತೆ ನಗು ಕಾಣಬೇಕು” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶನಿವಾರ(ಅ19) ಹೇಳಿಕೆ ನೀಡಿದ್ದಾರೆ.
“ಚುನಾವಣೆ ಫಲಿತಾಂಶಗಳು ಹೊರಬಂದಾಗ, ಕೆಲವರು ಎನ್‌ಸಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕದ ಕಾರಣ ಜಮ್ಮುವಿಗೆ ಅನ್ಯಾಯವಾಗುತ್ತದೆ ಎಂದು ವದಂತಿಗಳನ್ನು ಹರಡಲು ಪ್ರಾರಂಭಿಸಿದರು. ಆದರೆ ಯಾರು ಮತ ನೀಡಿದರೂ ನೀಡದಿದ್ದರೂ ನಮ್ಮ ಸರಕಾರ ಎಲ್ಲರಿಗಾಗಿ ಇರುತ್ತದೆ ಎಂದು ಮೊದಲ ದಿನವೇ ಸ್ಪಷ್ಟಪಡಿಸಿದ್ದೇನೆ” ಎಂದರು.
ಎರಡೂ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡಲು ಮುಫ್ತಿ ಮೊಹಮ್ಮದ್ ಸಯೀದ್, ಗುಲಾಂ ನಬಿ ಆಜಾದ್ ಮತ್ತು ಅವರ ನೇತೃತ್ವದ ಹಿಂದಿನ ಸಮ್ಮಿಶ್ರ ಸರಕಾರಗಳಂತೆ ಉಪಮುಖ್ಯಮಂತ್ರಿಯನ್ನು ನೇಮಿಸಲು ನ್ಯಾಷನಲ್ ಕಾನ್ಫೆರೆನ್ಸ್ ಯಾವುದೇ ಒತ್ತಾಯಕ್ಕೆ ಒಳಗಾಗಿರಲಿಲ್ಲ. ನಾವು ನಿರ್ಧಾರ ತೆಗೆದುಕೊಂಡು ನಮ್ಮದೇ ಪಕ್ಷದಿಂದಲೇ ಉಪಮುಖ್ಯಮಂತ್ರಿಯಾಗಿ ಸುರೀಂದರ್ ಚೌಧರಿ ಅವರನ್ನು ನೇಮಿಸಿದ್ದೇವೆ. ಸಂಪುಟ ಸೇರುವ ಬಗ್ಗೆ ಕಾಂಗ್ರೆಸ್ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಹೇಳಿದರು.
“ನ್ಯಾಷನಲ್ ಕಾನ್ಫೆರೆನ್ಸ್ ಮುಸ್ಲಿಮರ ಪಕ್ಷ ಮತ್ತು ಜಮ್ಮುವಿನ ನಾಯಕರನ್ನು ಸಹಿಸಲಾಗದ ಕಾಶ್ಮೀರ ಮೂಲದ ರಾಜವಂಶದ ಪಕ್ಷ ಎಂದು ಚುನಾವಣ ಪ್ರಚಾರದ ಸಮಯದಲ್ಲಿ ಹೇಳುತ್ತಿದ್ದವರಿಗೆ ಇದು ಉತ್ತರವಾಗಿದೆ. ಈಗ ನಮ್ಮಲ್ಲಿ ಉಪಮುಖ್ಯಮಂತ್ರಿ ಇದ್ದಾರೆ, ಅವರು ಹಿಂದೂ ಮತ್ತು ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟೀಕೆಗಳಿಗೆ ತಿರುಗೇಟು ನೀಡಿದರು.
ಬಿಜೆಪಿಯನ್ನು ಹೆಸರಿಸದೆ ಆಕ್ರೋಶ ಹೊರ ಹಾಕಿದ ಸಿಎಂ ”ಒಂದು ಪಕ್ಷಕ್ಕೆ ಲಾಭವಾಗುವ ರೀತಿಯಲ್ಲಿ ಡಿಲಿಮಿಟೇಶನ್ ಮತ್ತು ಮೀಸಲಾತಿ ಮಾಡಲಾಗಿದೆ ಆದರೆ ಸರಕಾರಿ ಯಂತ್ರಗಳ ಬಳಕೆ ಸೇರಿದಂತೆ ಎಲ್ಲಾ ತಂತ್ರಗಳು ನಿಮಗೆ ಚುನಾವಣೆ ಗೆಲ್ಲಲು ಎಂದಿಗೂ ಸಹಾಯ ಮಾಡುವುದಿಲ್ಲ” ಎಂದರು.
ಚುನಾವಣೆಯಲ್ಲಿ ಜಮ್ಮುವಿನಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 90 ಸ್ಥಾನಗಳಲ್ಲಿ ಬಿಜೆಪಿ 29 ಸ್ಥಾನಗಳನ್ನು ಗೆದ್ದು 25.64 ಶೇಕಡಾ ಮತಗಳನ್ನು ಗಳಿಸಿತ್ತು.