ಶ್ರೀನಗರ: ಭಾರತೀಯ ಚುನಾವಣಾ ಆಯೋಗವು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಿಸಿದ ಬಳಿಕ ಬಹುಮತ ಪಡೆದ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಮಿತ್ರಪಕ್ಷಗಳು ಒಟ್ಟಾಗಿ ಸರ್ಕಾರ ರಚನೆಗೆ ಮುಂದಾಗಿದೆ.
ಇದೇ ವೇಳೆ ನಾಲ್ವರು ಸ್ವತಂತ್ರ ಶಾಸಕರು ಗುರುವಾರ (ಅ.10) ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟಕ್ಕೆ ಸೇರಿದರು. ಎನ್‌ಸಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನ್ಯಾಷನಲ್ ಕಾನ್ಫರೆನ್ಸ್ ನ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾದರು.
ಆದರೆ ಮೈತ್ರಿಕೂಟದ ಪಾಲುದಾರರೊಂದಿಗೆ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
90 ಸದಸ್ಯ ಬಲದ ಜಮ್ಮು ಕಾಶ್ಮೀರ ಅಸೆಂಬ್ಲಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದುಕೊಂಡಿದೆ. ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಅಧಿಕಾರ ಸ್ಥಾಪನೆಗೆ 46 ಸ್ಥಾನಗಳು ಅಗತ್ಯ. ಎನ್‌ಸಿಯ ಮಿತ್ರಪಕ್ಷ ಕಾಂಗ್ರೆಸ್ ಆರು ಸ್ಥಾನಗಳನ್ನು ಗಳಿಸಿದೆ. ಇದೀಗ ನಾಲ್ಕು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಎನ್‌ಸಿ ಸ್ವಂತ ಬಲದಿಂದ ಬಹುಮತ ಪಡೆದಿದ್ದು, ಕಾಂಗ್ರೆಸ್ ಮೇಲೆ ಅವಲಂಬಿತವಾಗಿಲ್ಲ. ಎನ್‌ಸಿ ಗೆ ಸ್ವತಂತ್ರ ಶಾಸಕರು ಬೆಂಬಲ ನೀಡಿರುವುದು ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷದ ಚೌಕಾಶಿ ಮಾಡುವ ಶಕ್ತಿಯನ್ನೂ ಕಡಿಮೆ ಮಾಡಿದೆ.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.