ಶ್ರೀನಗರ: ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಅಂತಿಮಗೊಂಡಿದ್ದು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ ಸರ್ಕಾರ ರಚನೆಗೆ ಅಂತಿಮ ತಯಾರಿಯನ್ನು ನಡೆಸಿದೆ.
ರಾಜ್ಯದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ ಸರ್ಕಾರ ರಚನೆ 46 ಸ್ಥಾನಗಳ ಅಗತ್ಯ ಇದ್ದು ಅದರಂತೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಗಳಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ಇದರ ಜೊತೆಗೆ ನೂತನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಘೋಷಣೆ ಮಾಡಿದ್ದು ತನ್ನ ಮಗ ಒಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಚುನಾವಣಾ ಫಲಿತಾಂಶ ಅಂತಿಮ ಹಂತ ತಲುಪುತಿದ್ದಂತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಎರಡು ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬುಡ್ಗಾಮ್ ಮತ್ತು ಗಂಡರ್ಬಾಲ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಮರ್ ಬುಡ್ಗಾಮ್ ನಲ್ಲಿ 18,485 ಮತಗಳ ಅಂತರದಿಂದ ಗೆದ್ದರೆ, ಗಂಡರ್ಬಾಲ್ ನಲ್ಲಿ ಸುಮಾರು 9,766 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇದರೊಂದಿಗೆ 370 ನೇ ವಿಧಿಯನ್ನು ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿ ಜಮ್ಮು ಕಾಶ್ಮೀರದ ಜನತೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
“10 ವರ್ಷಗಳ ನಂತರ, ಜನರು ನಮಗೆ ತಮ್ಮ ಜನಾದೇಶವನ್ನು ನೀಡಿದ್ದಾರೆ, ನಾವು ಅವರ ನಿರೀಕ್ಷೆಗಳನ್ನು ಈಡೇರಿಸಬೇಕಾಗಿದೆ. ಇದರೊಂದಿಗೆ ಜೈಲಿನಲ್ಲಿರುವ ಅಮಾಯಕರನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತೇವೆ ಜೊತೆಗೆ ಹಿಂದೂ ಮುಸ್ಲಿಮರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಕಾರ್ಯಕ್ಕೆ ನಾವು ಮುಂದಾಗಬೇಕಿದೆ ಎಂದು ಹೇಳಿದರು.