Advertisement

J&K; ಸಿಎಂ ಆಗಿ ಒಮರ್ ಅಬ್ದುಲ್ಲಾ, ಡಿಸಿಎಂ ಆಗಿ ಸುರೀಂದರ್ ಚೌಧರಿ ಪ್ರಮಾಣ ವಚನ

01:49 PM Oct 16, 2024 | Team Udayavani |

ಶ್ರೀನಗರ: ಆರು ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶವು ತನ್ನ ಮೊದಲ ಸರಕಾರವನ್ನು ಪಡೆದುಕೊಂಡಿದ್ದು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಬುಧವಾರ(ಅ16) ಪ್ರಮಾಣ ವಚನ ಸ್ವೀಕರಿಸಿದರು.

Advertisement

ವಿಧಾನಸಭೆ ಚುನಾವಣೆಯಲ್ಲಿ ನೌಶೇರಾ ಕ್ಷೇತ್ರದಲ್ಲಿ ಜೆ & ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ರವೀಂದರ್ ರೈನಾ ಅವರನ್ನು ಸೋಲಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಸುರೀಂದರ್ ಸಿಂಗ್ ಚೌಧರಿ ಅವರು ಉಪಮುಖ್ಯಮಂತ್ರಿಯಾಗಿ ಹೊಸ ಸರಕಾರದಲ್ಲಿ ಜಮ್ಮುವಿನ ಪ್ರಾತಿನಿಧ್ಯವನ್ನು ತೋರಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಒಮರ್ ಅಬ್ದುಲ್ಲಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವಾರು ವಿಪಕ್ಷ ನಾಯಕರು ಭಾಗವಹಿಸಿದ್ದರು.

ಕೇಂದ್ರ ಸರಕಾರ ಭರವಸೆ ನೀಡಿದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಮುಂದಿಟ್ಟು ಕಾಂಗ್ರೆಸ್ ಹೊಸ ಸಚಿವ ಸಂಪುಟದಿಂದ ಹೊರಗುಳಿದಿದ್ದು, ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದೆ. ಕಾಂಗ್ರೆಸ್ ಮತ್ತು ಎನ್ ಸಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು.

Advertisement

ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಸಕಿನಾ ಇಟೂ, ಜಾವಿದ್ ದಾರ್, ಜಾವಿದ್ ರಾಣಾ (ಎಲ್ಲರೂ ನ್ಯಾಷನಲ್ ಕಾನ್ಫರೆನ್ಸ್‌). ಪಕ್ಷೇತರರಾದ ಸತೀಶ್ ಶರ್ಮ ಸಚಿವಗಿದ್ದಾರೆ. ನಾಲ್ಕು ಕ್ಯಾಬಿನೆಟ್ ಹುದ್ದೆಗಳು ಖಾಲಿ ಉಳಿದಿದ್ದು, ವಿಸ್ತರಣೆಯ ನಂತರ ಭರ್ತಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇದು ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರ ಎರಡನೇ ಅವಧಿಯಾಗಿದೆ. 2009 ರಿಂದ 2014 ರ ವರೆಗೆ ಸಿಎಂ ಆಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ರಾಜ್ಯವು 2019 ರಲ್ಲಿ ಕೇಂದ್ರಾಡಳಿತ ಪ್ರದೇಶವಾದ ನಂತರ ಅವರು ಅಧಿಕಾರ ವಹಿಸಿಕೊಂಡ ಮೊದಲಿಗರಾಗಿದ್ದಾರೆ. ಪ್ರಮಾಣವಚನ ಸಮಾರಂಭದ ಮೊದಲು, ಒಮರ್ ಅಬ್ದುಲ್ಲಾ ಅವರು ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ, ಅವರ ಅಜ್ಜ ಶೇಖ್ ಅಬ್ದುಲ್ಲಾ ಅವರ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು 90 ವಿಧಾನಸಭಾ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿತ್ತು. ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದುಕೊಂಡಿತು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ನಾಲ್ವರು ಪಕ್ಷೇತರರು ಬೆಂಬಲ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next