Advertisement

ಕಾಡು ಬೇಕು, ಕಾಡುವವನೂ ಬೇಕು…

05:06 PM Apr 18, 2018 | Team Udayavani |

ಲಕ್ಷ್ಮಣನ ಅಮ್ಮ ಅವನಿಗೆ ಒಂದು ಮಾತು ಹೇಳಿ ಕಳುಹಿಸಿದ್ದರಂತೆ… “ನೋಡು ಕಂದ, ಕಾಡಿನಲ್ಲಿ ದೀರ್ಘ‌ ಕಾಲ ಇರಬೇಕಾಗಿದೆ. ಅಲ್ಲಿ ರಾಮನಿಗೆ ಯಾರಿದ್ದಾರೆ? ನಿನ್ನ ಅತ್ತಿಗೆ ಸೀತೆ ನಮ್ಮ ಮನೆಯ ಸೊಸೆ ಮಾತ್ರವಲ್ಲ, ನಮ್ಮ ಮನೆ ಮಗಳೂ ಹೌದು. ಅವಳೂ ಕಾಡಿಗೆ ಹೊರಟಿದ್ದಾಳೆ. ಎಂತೆಂಥ ಕಷ್ಟ ಬರುತ್ತೋ? ಅವರಿಬ್ಬರ ರಕ್ಷಣೆಯ ಭಾರ ನಿನ್ನದು. 

Advertisement

ನಾನೂ ನನ್ನವರೊಂದಿಗೆ ಕಾಡಿಗೆ ಹೊರಡಲು ನಿರ್ಧರಿಸಿದೆ. ಅವರು ಒಪ್ಪಬೇಕಲ್ಲ…”ದಯವಿಟ್ಟು ಬೇಡ ಎನ್ನಬೇಡಿ’ ಅಂದೆ. ಮತ್ತೆ ಮತ್ತೆ ಬೇಡಿದೆ, ಹಟ ಹಿಡಿದೆ. ಅವರು ಕಾಡಿನ ಕಷ್ಟ ಹೇಳಿದರು. ದುಷ್ಟರ ಹಾವಳಿ ಕುರಿತು ಹೇಳಿದರು. “ಮಾವ- ಅತ್ತೆಯರ ಶುಶ್ರೂಷೆಯು ಕರ್ತವ್ಯದ ಒಂದು ಭಾಗ’ ಅಂತಲೂ ಹೇಳಿದರು. ನಾನು ಪಟ್ಟು ಸಡಿಲಿಸಲಿಲ್ಲ. ನನ್ನಪ್ಪ ಮದುವೆ ಮಾಡಿಕೊಡುವಾಗ “ಸಹಧರ್ಮಚರೀ ಭವ’ ಎಂದು ನನಗೆ ಹೇಳಿದ್ದನ್ನು ನೆನಪಿಸಿದೆ.

“ನೀವು ಧರ್ಮೇ ಚ, ಅರ್ಥೇ ಚ, ಕಾಮೇ ಚ ನಾತಿ ಚರಾಮಿ ಎಂದು ಪ್ರತಿಜ್ಞೆ ಮಾಡಿಲ್ಲವೇ?’ ಎಂದು ಕೇಳಿದೆ. “ವನವಾಸ ನಿಮ್ಮ ಧರ್ಮವಾದರೆ, ನನಗೂ ಅದು ಧರ್ಮವಲ್ಲವೇ? ಪತಿದೇವ, ನಿಮ್ಮ ಕಷ್ಟ, ನನ್ನ ಕಷ್ಟ. ನಿಮ್ಮ ಇಷ್ಟ ನನ್ನ ಇಷ್ಟ. ನನಗೆ ರಾಮನಿರುವ ಕಾಡು ಅಯೋಧ್ಯೆ, ರಾಮನಿರದ ಅಯೋಧ್ಯೆ ಕಾಡು’ ಎಂದೆ. ಕಾಡಿಗಾಗಿ ಕಾಡಿದ್ದು ಅಷ್ಟಿಷ್ಟಲ್ಲ. ಪುಟ್ಟ ಮಕ್ಕಳಂತೆ ರಚ್ಚೆ ಹಿಡಿದೆ. ಅವರು ಸುತರಾಂ ಒಪ್ಪಲಿಲ್ಲ.

ಕೊನೆಗೊಂದು ಕಠಿಣಾಸ್ತ್ರ ಪ್ರಯೋಗಿಸಿದೆ. ಅದುವರೆಗೂ ಅಂಥ ಅಸ್ತ್ರದ ಸಾಧ್ಯತೆ ಗೊತ್ತಿರಲಿಲ್ಲ. ಮಹಿಳೆ ಕೆಲವೊಮ್ಮೆ ಸ್ವರಕ್ಷಣೆಗಾಗಿ, ಇಲ್ಲವೇ ಕಾರ್ಯಸಾಧನೆಗಾಗಿ ಹೊಸ ಹೊಸ ಅಸ್ತ್ರ ಹೊಸೆಯಬೇಕಾಗುತ್ತದೆ. ಅದು ಆ ಕ್ಷಣದ ಆವಿಷ್ಕಾರವೂ ಆಗಬಹುದು. “ನಿಮ್ಮನ್ನು ಅಳಿಯನನ್ನಾಗಿ ಮಾಡಿಕೊಳ್ಳುವಾಗ ನನ್ನಪ್ಪ, ನಿಮ್ಮನ್ನು ಪುರುಷಾಕಾರದ ಹೆಂಗಸು ಎಂದು ತಿಳಿದಿರಲಿಲ್ಲ, ಇಷ್ಟೇನಾ ನಿಮ್ಮ ಪೌರುಷ?

ನನ್ನನ್ನು ಜತೆಯಲ್ಲಿ ಕರಕೊಂಡು ಹೋಗದಿದ್ದರೆ ವಿಷಪ್ರಾಶನ ಮಾಡಿ ಸಾಯುತ್ತೇನೆಯೇ ವಿನಾ ನಿಮ್ಮನ್ನು ಬಿಟ್ಟು ಬದುಕಿರುವುದಿಲ್ಲ’ ಎಂದುಬಿಟ್ಟೆ. ಒಂದು ಕ್ಷಣ ಅವರು ತಬ್ಬಿಬ್ಬು. ಆ ನನ್ನ ಮಾತು ಅವರಿಗೆ ಚುಚ್ಚಿರಬೇಕು. ಕೊನೆಗೆಂದರು…”ನಿನ್ನನ್ನು ಬಿಟ್ಟು ಹೋಗಲು ನನಗೂ ಮನಸ್ಸಿಲ್ಲ. ಕಗ್ಗಾಡಿನಲ್ಲಿರುವುದಕ್ಕೆ ಮಾನಸಿಕವಾಗಿ ನೀನೆಷ್ಟು ಸಿದ್ಧವಾಗಿದ್ದೀಯಾ ಎಂಬುದನ್ನು ತಿಳಿಯಬೇಕಾಗಿತ್ತು, ಅದಕ್ಕೇ ಕಠಿಣನಾದೆ’ ಎಂದು ನಕ್ಕರು.

Advertisement

ಸತ್ಯ ಹೇಳಬೇಕೆಂದರೆ, ಕಠಿಣ ಮಾತು ನನ್ನ ಮನಸ್ಥಿತಿಗೆ ಒಗ್ಗದ್ದು. ಆ ಸಂದರ್ಭದಲ್ಲಿ ನನಗೆ ಬೇರೆ ದಾರಿಯಿರಲಿಲ್ಲ. “ಕ್ಷಮಿಸಿಬಿಡಿ’ ಎಂದೆ.   ರಾಮ ನಾರು ಬಟ್ಟೆಯನ್ನುಟ್ಟು ಕಾಡಿಗೆ ತೆರಳಬೇಕೆಂದು ಕೈಕೇಯಿ ಅತ್ತೆ ವಿಧಿಸಿದ ಷರತ್ತು ಸೀತೆಗೆ ಅನ್ವಯವಾಗಬೇಕಿಲ್ಲ, ಸಾಮ್ರಾಗ್ರಿಗೆ ಉಚಿತವಾದ ವೇಷಭೂಷಣಗಳೊಂದಿಗೇ ಸೀತೆ ಕಾಡಿಗೆ ಹೋಗಲಿ ಎಂದು ದಶರಥರಾಜರು, ಮಂತ್ರಿ ಸುಮಂತ್ರ ಮತ್ತು ಹಿರಿಯರು ಹೇಳಿದರೂ, ಕೈಕೇಯಿ ಅತ್ತೆ ಮಾತ್ರ, ನನ್ನ ಮುಂದೆ ನಾರುಸೀರೆ ತಂದು ಕುಕ್ಕಿದರು.

ಹಾಗೆ ಎಸೆದದ್ದಕ್ಕೆ ಬೇಸರವಿಲ್ಲ. ಆದರೆ, ಅದನ್ನು ಉಡಲು ಗೊತ್ತಾಗದೆ ಬಹಳ ಸಂಕೋಚಪಟ್ಟೆ. ಆಗ ನನ್ನವರೇ ನೆರವಾದರು. ಬೇಡವೆಂದರೂ ಹಟ ಹಿಡಿದು ಲಕ್ಷ್ಮಣನೂ ಕಾಡಿಗೆ ಹೊರಟ. ಅವನು ನಮ್ಮೊಂದಿಗೆ ಬಾರದೇ ಹೋಗಿದ್ದರೆ ಬಹಳ ಕಷ್ಟವಾಗುತ್ತಿತ್ತು. “ಲಕ್ಷ್ಮಣಃ ಮಮ ದಕ್ಷಿಣೋ ಬಾಹುಃ’ (ಲಕ್ಷ್ಮಣ ನನ್ನ ಬಲಗೈ) ಎಂದು ನಮ್ಮವರು ಹೇಳುತ್ತಿದ್ದರು. ನಮ್ಮವರೂ ಅಂತ ಹೊಗಳುತ್ತಿಲ್ಲ, ನಮ್ಮ ಮನೆಯಲ್ಲಿ ನಾಲ್ವರು ಸಹೋದರರ ನಡುವೆ ನಿವ್ಯಾಜ ಪ್ರೀತಿಗೆ ಎಂದೂ ಕೊರತೆಯಿರಲಿಲ್ಲ. ಸ್ವಾರ್ಥಪರವಾಗಿ ಯಾರೂ ಯೋಚಿಸುತ್ತಿರಲಿಲ್ಲ.

ಎಲ್ಲರೂ ತ್ಯಾಗದ ಪ್ರತಿರೂಪಗಳು. ಇದೇ ನಮ್ಮ ಕುಟುಂಬದ ಶಕ್ತಿ. ಆದರೂ ಲಕ್ಷ್ಮಣನ ಮೇಲೆ ನನಗೊಂದು ಬೇಸರವಿತ್ತು. “ಎಲ್ಲ ಜಾಣರು ತುಸು ಕೋಣರು’ ಎನ್ನುತ್ತಾರಲ್ಲ ಹಾಗೆ ಆತ. ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಿಸಿಬಿಡುತ್ತಿದ್ದ, ದುಡುಕುತ್ತಿದ್ದ, ಕೋಪ ಬಂದಾಗ ಹಾವಿನಂತೆ ಬುಸುಗುಡುತ್ತಿದ್ದ. ಸಿಡುಕುತ್ತಿದ್ದ. ಆದರೆ, ಮನಸ್ಸು ಮಾತ್ರ ಅಪ್ಪಟ ಚಿನ್ನ. ನೋಡಿ, ಕಾಡಿಗೆ ಹೊರಟ ಆತ ಹೆಂಡತಿಗೆ ಒಂದು ಮಾತು ಹೇಳುವುದು ಬೇಡವೇ? ಅಮ್ಮನಿಗೆ ಹೇಳಿದನಂತೆ, ಹೆಂಡತಿಗೆ ಹೇಳಲಿಲ್ಲವಂತೆ. ಇದೆಂಥ ರೀತಿ? ಇದೇ ನನಗೆ ಬೇಸರ ತಂದಿದ್ದು.

ಅಮ್ಮನಿಗೆ ಹೇಳಿದರೆ ಸಾಕು, ಎಲ್ಲರಿಗೂ ಹೇಳಿದಂತೆಯೇ ಎಂದು ಅಣ್ಣನ ಬಳಿ ಒಮ್ಮೆ ಹೇಳಿದನಂತೆ. ಕಾಡಿಗೆ ಹೊರಡುವಾಗ ಲಕ್ಷ್ಮಣನ ಅಮ್ಮ ಅವನಿಗೆ ಒಂದು ಮಾತು ಹೇಳಿ ಕಳುಹಿಸಿದ್ದರಂತೆ… “ನೋಡು ಕಂದ, ಕಾಡಿನಲ್ಲಿ ದೀರ್ಘ‌ ಕಾಲ ಇರಬೇಕಾಗಿದೆ. ಅಲ್ಲಿ ರಾಮನಿಗೆ ಯಾರಿದ್ದಾರೆ? ನಿನ್ನ ಅತ್ತಿಗೆ ಸೀತೆ ನಮ್ಮ ಮನೆಯ ಸೊಸೆ ಮಾತ್ರವಲ್ಲ, ನಮ್ಮ ಮನೆ ಮಗಳೂ ಹೌದು. ಅವಳೂ ಕಾಡಿಗೆ ಹೊರಟಿದ್ದಾಳೆ.

ಎಂತೆಂಥ ಕಷ್ಟ ಬರುತ್ತೋ? ಅವರಿಬ್ಬರ ರಕ್ಷಣೆಯ ಭಾರ ನಿನ್ನದು. ಕಂದ, ರಾಮನನ್ನೇ ತಂದೆ ಎಂದು ತಿಳಿ, ಸೀತೆಯನ್ನೇ ನಾನೆಂದು (ತಾಯಿ) ಭಾವಿಸಿಕೋ, ಕಾಡನ್ನೇ ಅಯೋಧ್ಯೆಯೆಂದು ತಿಳಿದುಕೋ, ಸುಖವಾಗಿ ಹೋಗಿ ಬಾ ಮಗನೇ’ ಎಂದು ಹರಸಿದರಂತೆ. ಎಂಥ ವಿಶಾಲ ಆಲೋಚನೆ, ಇಂಥ ಅಮ್ಮನೂ (ಅತ್ತೆಯೂ) ಇರುತ್ತಾರಾ!?  ಇಂಥದ್ದೇ ಮಾತನ್ನು ಕೌಸಲ್ಯಾ ಅತ್ತೆಯೂ ರಾಮನಿಗೆ ಹೇಳಿದ್ದರು.

“ಮಗೂ, ನನಗೆ ಲಕ್ಷ್ಮಣ ಬೇರೆ ಅಲ್ಲ, ನೀನು ಬೇರೆ ಅಲ್ಲ, ನಿಮ್ಮೊಂದಿಗೆ ಅವನಿದ್ದಾನೆ ಎಂಬುದೇ ನನಗೆ ಧೈರ್ಯ. ಸೀತೆಯದೇ ಹೆಚ್ಚು ಚಿಂತೆ ನನಗೆ. ನಿಮ್ಮನ್ನು ಅವನು ನೋಡಿಕೊಳ್ಳಬೇಕು. ಅವನನ್ನು ನೀನು ನೋಡಿಕೊಳ್ಳಬೇಕು. ನಿಮ್ಮೆಲ್ಲರನ್ನೂ ನಮ್ಮ ಕುಲದೈವ ಸೂರ್ಯದೇವ ರಕ್ಷಿಸಬೇಕು’ ಎಂದು ಹರಸಿದ್ದರು. ದುಃಖ ಒತ್ತರಿಸಿ ಬರುತ್ತಿತ್ತು. “14 ವರ್ಷ ನಿಮ್ಮನ್ನೆಲ್ಲ ಬಿಟ್ಟು ನಾನು ಹೇಗಿರಲಿ ಮಗನೆ, ನಾನು ಹತಭಾಗ್ಯಳು’ ಎಂದು ಮುಖ ಮುಚ್ಚಿಕೊಂಡು ಒಂದೇ ಸಮನೆ ರೋದಿಸಿದ್ದನ್ನು ನೆನೆಸಿಕೊಂಡರೆ ಈಗಲೂ ಕರುಳು ಕುಯ್ದಂತಾಗುತ್ತದೆ. 

ಅಮ್ಮಂದಿರಿಗೆ ತಕ್ಕ ಮಕ್ಕಳು, ಮಕ್ಕಳಿಗೆ ತಕ್ಕ ಅಮ್ಮಂದಿರು. ಕೌಸಲ್ಯಾ- ಸುಮಿತ್ರಾ ಅತ್ತೆ ಒಂದು ಜೋಡಿ. ಅವರಿಗೆ ತಕ್ಕಂತೆ ರಾಮಲಕ್ಷ್ಮಣರ ಜೋಡಿ. ಭರತನಿಗೆ ಶತ್ರುಘ್ನ ಜೋಡಿ. ಕೊನೆಗೆ ಎಲ್ಲರಿಗೂ ಎಲ್ಲರೂ ಜೋಡಿ. ಸಮಾನ ಶೀಲ, ಸಮಾನ ಮನಸ್ಕತೆ, ಸಮಾನ ಗುಣವುಳ್ಳವರು ಪರಸ್ಪರ ಆತ್ಮೀಯರಾಗುತ್ತಾರಂತೆ. ಸತ್ಯವಾದ ಮಾತು. ಲೋಕಕ್ಕೆ ಆದರ್ಶ ಜೀವನದ  ಹತ್ತು ಹಲವು ಪ್ರಥಮಗಳು ಹುಟ್ಟಿದ್ದೇ ಅಯೋಧ್ಯೆಯ ನೆಲದಲ್ಲಿ ಎಂದು ವಾಲ್ಮೀಕಿಗಳು ಅಭಿಮಾನದಿಂದ ಹೇಳುತ್ತಿದ್ದರು. ಅದು ಸತ್ಯಸ್ಯ ಸತ್ಯ. ಇದಕ್ಕೆಲ್ಲ ನಾನೇ ಸಾಕ್ಷಿ.

* ಸಿ.ಎ. ಭಾಸ್ಕರ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next