Advertisement

Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ

01:10 PM Nov 08, 2024 | Team Udayavani |

ವಂಡ್ಸೆ: ವಂಡ್ಸೆಯಿಂದ ಚಿತ್ತೂರು, ಇಡೂರು ಮಾರ್ಗವಾಗಿ ಸಾಗುವ ರಾ.ಹೆದ್ದಾರಿಯ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಪ್ರಯಾಣಿಕರ ಪಾಲಿಗೆ ಹರಸಾಹಸಪಟ್ಟು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಕಳೆದ 2 ವರ್ಷಗಳಿಂದ
ದುಃಸ್ಥಿತಿಯಲ್ಲಿರುವ ಇಲ್ಲಿನ ಮುಖ್ಯ ರಸ್ತೆಯ ಡಾಮರು ಕಾಮಗಾರಿ ನಡೆಯದಿರುವುದರಿಂದ ಈ ಮಾರ್ಗವಾಗಿ ವಾಹನದಲ್ಲಿ ಸಾಗಲು ಕಷ್ಟಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಕೂಡ ಸಾಗದಷ್ಟು ಹದಗೆಟ್ಟಿದ್ದು, ಭಾರೀ ಹೊಂಡಗಳಿಂದ ಕೂಡಿದೆ. ರಾತ್ರಿ ಪ್ರಯಾಣವಂತೂ ಹೇಳತೀರದು. ಈ ಭಾಗದಲ್ಲಿ ವಾಹನ ಅಪಘಾತ ನಡೆಯುತ್ತಿದ್ದರೂ ಕೂಡ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆ ಸಹಿತ ಶಾಸಕರಿಗೆ ಹಾಲ್ಕಲ್‌ ನಿಂದ ವಂಡ್ಸೆ ತನಕ ಸಂಪೂರ್ಣ ಡಾಮರು ಕಾಮಗಾರಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ದುರಸ್ತಿಯ ಆಶ್ವಾಸನೆ ಮಾತ್ರ ಕೇಳಿಬರುತ್ತಿದ್ದು, ಚಿಕ್ಕಾಸು ಅನುದಾನ ಬಿಡುಗಡೆಗೊಳ್ಳದಿರುವುದು ಪ್ರವಾಸಿಗರ ಪಾಲಿಗೆ ನಿತ್ಯ ನರಕವಾಗಿದೆ.

ಜನರ ಸಂಕಷ್ಟದ ನಿರ್ಲಕ್ಷ್ಯ ಬೇಡ
ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ಹಾಗೂ ಸಿಗಂದೂರು ದೇಗುಲಕ್ಕೆ ಸಾಗಲು ಸನಿಹದ ಮಾರ್ಗವಾಗಿರುವ ವಂಡ್ಸೆ, ಜಡ್ಕಲ್‌, ಹಾಲ್ಕಲ್‌ ಮಾರ್ಗವೂ ಸಂಪೂರ್ಣವಾಗಿ ಹದಗೆಟ್ಟಿದ್ದರೂ, ಸರಕಾರದ ಗಮನ ಸೆಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ನೂರಾರು ವಾಹನಗಳು ಈ ಮಾರ್ಗವಾಗಿ ಪ್ರತಿದಿನ ಸಂಚರಿಸುತ್ತಿದ್ದರೂ ಹೊಂಡ ಮಯ ರಸ್ತೆಗೆ ಮರುಡಾಮರೀಕರಣದೊಡನೆ ಸಂಪೂರ್ಣ ಪರಿಹಾರದ ಬೇಡಿಕೆ ಈಡೇರಿಕೆಗೆ ಇನ್ನೂ ಮುಹೂರ್ತ ಕೂಡಿ ಬರದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಶೀಘ್ರ ಕ್ರಮಕೈಗೊಳ್ಳಿ
ಸುಗಮ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಚಿತ್ತೂರು, ಇಡೂರು ರಾ.ಹೆದ್ದಾರಿ ಡಾಮರು ಕಾಮಗಾರಿ ಕೂಡಲೇ ಆರಂಭಿಸಬೇಕಾಗಿದೆ. ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.
– ರವಿರಾಜ ಶೆಟ್ಟಿ, ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.

Advertisement

ಜಲ್ಲಿಯಿಂದ ಇನ್ನೂ ಸಂಕಷ್ಟ!
ಅಲ್ಲಲ್ಲಿ ಮುಖ್ಯ ರಸ್ತೆಯ ಹೊಂಡಗಳಿಗೆ ಜಲ್ಲಿಯ ತೇಪೆ ಹಾಕಿ ಭರ್ತಿ ಮಾಡಿದ್ದರೂ ಘನ ವಾಹನಗಳ ಸಂಚಾರದಿಂದ ಜಲ್ಲಿಗಳು ಹೊರಚೆಲ್ಲಿದ್ದು, ಮತ್ತಷ್ಟು ಗೊಂದಲಕ್ಕೆ ಎಡೆಮಾಡಿದಂತಾಗಿದೆ. ಯಾಕೆಂದರೆ ರಸ್ತೆಯುದ್ದಕ್ಕೂ ಹರಡಿದ ಜಲ್ಲಿ ವೇಗವಾಗಿ ಸಾಗುವ ವಾಹನಗಳ ಚಕ್ರದಿಂದ ಇತರ ವಾಹನಗಳ ಗಾಜಿಗೆ ತಗಲಿ ಗಾಜು ಒಡೆದು ನಷ್ಟ ಸಂಭವಿಸಿದ ಘಟನೆ ನಡೆದಿದೆ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next