Advertisement

ತೆಕ್ಕಟ್ಟೆ: 42 ಕೆರೆಗಳಿರುವ ಗ್ರಾಮದಲ್ಲಿ ನೀರಿಗೆ ಪರದಾಟ!

10:55 PM Jan 16, 2021 | Team Udayavani |

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮದಲ್ಲಿ 42 ಕೆರೆಗಳಿವೆ. ಆದರೆ ನೀರಿನ ಬವಣೆ ಮಾತ್ರ ತಪ್ಪಿಲ್ಲ! ಇಲ್ಲಿ 10 ಕೆರೆಗಳನ್ನು ಮಾತ್ರ ಗ್ರಾಮಸ್ಥರು ಬಳಸುತ್ತಿದ್ದು  ಉಳಿದ ಕೆರೆಗಳು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ.

Advertisement

ನಿರ್ವಹಣೆ ಇಲ್ಲ :

ಭೌಗೋಳಿಕವಾಗಿ ಇಲ್ಲಿನ ಕರಾವಳಿ ಹೊಯಿಗೆ ಮಿಶ್ರಿತ ಮಣ್ಣಿಗೆ ಮಳೆ ನೀರನ್ನು ಹಿಡಿದಿಡುವ ಸಾಮರ್ಥ್ಯ ಇಲ್ಲವಾದ್ದರಿಂದ ಹಿಂದೆ ಸಾಗುವಳಿ ಕೃಷಿ ಚಟುವಟಿಕೆಗೆ ಕೆರೆಗಳೇ ಆಶ್ರಯವಾಗಿದ್ದವು. ಮಳೆಗಾಲದಲ್ಲಿ ಕೆರೆ ತುಂಬಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿತ್ತು. ಬದಲಾದ ಸಮಯದಲ್ಲಿ ಕೆರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ನಿರ್ವಹಣೆಯೂ ಇಲ್ಲದೆ, ಹೂಳು ತುಂಬಿ ಅಂತರ್ಜಲ ಮಟ್ಟವೂ ಕಡಿಮೆಯಾಗಿದೆ. ಈ ನಡುವೆ ಕೆರೆಗಳ ಅತಿಕ್ರಮಣ ಹಾಗೂ ಕಸ ಎಸೆಯುವ ತ್ಯಾಜ್ಯ ಘಟಕಗಳಾಗಿ ಮಾರ್ಪಟ್ಟಿವೆ.

ಬರಿದಾಗುತ್ತಿದೆ ನೀರ ಸೆಲೆಗಳು :

ಇಡೀ ಗ್ರಾಮ 42 ಕೆರೆಗಳನ್ನು ಸೇರಿಸಿದರೆ 31 ಎಕರೆ 30 ಸೆಂಟ್ಸ್‌ ವಿಸ್ತೀರ್ಣವಾಗುತ್ತದೆ. ಆದರೆ ನೀರಿಗೆ ಸಮಸ್ಯೆಯಿದೆ. ಪಂಚಾಯತ್‌ ವ್ಯಾಪ್ತಿಯ ಕೊಮೆ, ಕನ್ನುಕೆರೆ, ಮಾಲಾಡಿ, ಮಲ್ಯಾಡಿ ಸೇರಿದಂತೆ ಗ್ರಾಮದಲ್ಲಿ ಸುಮಾರು 5,590 ಸಾವಿರಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿದ್ದು ಸುಮಾರು 1638 ವಾಣಿಜ್ಯ ಕಟ್ಟಡ ಹಾಗೂ ಮನೆಗಳನ್ನು ಒಳಗೊಂಡಿದೆ. ಹೆಚ್ಚಿನ ಮನೆಗಳಲ್ಲಿ ಬಾವಿಗಳಿವೆ. ನೀರಿನ ಬಳಕೆಯೂ ಸಾಕಷ್ಟಿದೆ.ಆದರೆ ಅಂತರ್ಜಲ ವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಮಾರ್ಚ್‌ನಲ್ಲಿ ನೀರಿನ ಮಟ್ಟ ಕುಸಿಯುವ ಆತಂಕ ಕಾಡಿದೆ. ಆಲುಗುಡ್ಡೆ, ಮಾಲಾಡಿ, ಕೊಮೆ, ಶೇಡಿಗುಳಿ ಪರಿಸರದಲ್ಲಿ ನೀರಿನ ಕೊರತೆ ಬಿಗಡಾಯಿಸುವ ಸಾಧ್ಯತೆ ಇದೆ.

Advertisement

ಮೂಲಸ್ವರೂಪ  ಉಳಿಸಿ :

ಕುಂಭಾಶಿ ಹಾಗೂ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಗಡಿಭಾಗದಲ್ಲಿ  ಸುಮಾರು 3 ಎಕರೆ ವಿಸ್ತೀರ್ಣದ  ಶೇಡಿಗುಳಿ ಮದಗ ಹಿಂದೆ ಕೃಷಿಕರ ಪಾಲಿಗೆ ವರವಾಗಿದ್ದು, ಸುತ್ತಮುತ್ತಲಿನ ಸುಮಾರು ನೂರಾರು ಎಕರೆ ಕೃಷಿ ಭೂಮಿಗಳಿಗೆ ನೀರುಣಿಸುತ್ತಿತ್ತು. ಬದಲಾದ ಕಾಲದಲ್ಲಿ ಶೇಡಿಗುಳಿ ಮದಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಗಿಡಗಂಟಿಗಳು ಆವರಿಸಿದೆ. ಈಗಾಗಲೇ ಮದಗದ ಸುತ್ತಮುತ್ತಲಿನ ಜಾಗಗಳು ಅತಿಕ್ರಮಣವಾಗುತ್ತಿದ್ದು  ಈ ನೀರಿನ ಮೂಲ ಸೆಲೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಂರಕ್ಷಿಸಬೇಕಾಗಿದೆ.

ಪ್ರಕೃತಿ ಮೇಲೆ ಮಾನವನ ನಿರಂತರ ಪ್ರಹಾರದಿಂದಾಗಿ ಹಿಂದೆಂದೂ ಕಾಣದ ಅಂತರ್ಜಲ ಕುಸಿತ ಗ್ರಾಮಗಳಲ್ಲಿ ಎದುರಾಗುವ ಭೀತಿ ಇದೆ. ಕೆರೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ ಎಲ್ಲ  ಸರಕಾರಿ ಕೆರೆಗಳಿಗೆ ನಾಮಫಲಕ ಅಳವಡಿಸಿ ಅವುಗಳನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ದುರಸ್ತಿಗೊಳಿಸಬೇಕು. -ಸತೀಶ್‌ ಕುಮಾರ್‌ ತೆಕ್ಕಟ್ಟೆ , ಸಾಮಾಜಿಕ ಕಾರ್ಯಕರ್ತ

ನೀರಿನ ಕೊರತೆ ನಿವಾರಣೆಗೆ ಮಳೆನೀರು ಕೊಯ್ಲು ಹಾಗೂ ಕೆರೆಗಳಿಗೆ ನೀರು ಇಂಗಿಸಿ ಅಂತರ್ಜಲವನ್ನು ಸಂರಕ್ಷಿಸುವ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಗ್ರಾಮದ ಪ್ರಮುಖ ಕೆರೆಗಳಾದ ಜೈನರ ಕೆರೆ ಸೇರಿದಂತೆ ನರೇಗಾ ಯೋಜನೆಯಡಿಯಲ್ಲಿಪುರಾತನ ಕೆರೆಗಳ ಪುನಶ್ಚೇತನಗೊಳಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದೇವೆ .- ಸುನಿಲ್‌ ಪಿಡಿಒ, ತೆಕ್ಕಟ್ಟೆ ಗ್ರಾಮ ಪಂಚಾಯತ್‌

 

-ಲೋಕೇಶ್‌  ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next