ಸೋಲಾಪುರ(ಮಹಾರಾಷ್ಟ್ರ): ಭಾರಿ ಮಳೆಯ ಕಾರಣದಿಂದ ಸುಮಾರು 20 ಅಡಿ ಎತ್ತರದ ಗೋಡೆಯೊಂದು ಕುಸಿದ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ.
ಭೀಮಾ ನದಿಯ ನಿರ್ಮಾಣ ಹಂತದಲ್ಲಿರುವ ಘಾಟ್ ಕುಸಿತವಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ನಡೆದ ಈ ಘಟನೆಯಲ್ಲಿ ಮೃತರಾದವರನ್ನು ಮಂಗೇಶ್ ಅಭಂಗ್ ರಾವ್, ರಾಧಾ ಅಭಂಗ್ ರಾವ್, ಗೋಪಾಲ್ ಅಭಂಗ್ ರಾವ್, ಪಿಲ್ಲೂ ಜಗಪತ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ.
ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಗೋಡೆ ಕುಸಿದು ಬಿದ್ದಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆಯ ಬಳಿ ನಿಂತಿದ್ದ ಯಾತ್ರಿಕರು ಘಟನೆಯಲ್ಲಿ ಅಸುನೀಗಿದ್ದಾರೆ ಎಂದು ಪಂಡರಾಪುರ ಉಪವಿಭಾಗಾಧಿಕಾರಿ ಸಚಿನ್ ಢೋಲೆ ಹೇಳಿದ್ದಾರೆ.
ಇದನ್ನೂ ಓದಿ:ವರುಣಾರ್ಭಟಕ್ಕೆ ನಲುಗಿದ ರೈತ: ಬೆಳೆ ನಷ್ಟ
ಸೋಲಾಪುರ ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಜಿಲ್ಲೆಯ ಕೆಲವು ಭಾಗದಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿಯಿದೆ. ಇದುವರೆಗೆ 17000 ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಪಂಡರಾಪುರ ಒಂದರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.