Advertisement

ಭಕ್ತರ ಮನೆಗೆ ಬರುತ್ತಿದ್ದ ನಡೆದಾಡುವ ದೇವರು

07:13 AM Jan 22, 2019 | Team Udayavani |

ಕೋಲಾರ: ತುಮಕೂರು ಸಿದ್ಧಗಂಗಾ ಮಠದ ಯಾವುದೇ ಶಾಖೆ ಜಿಲ್ಲೆಯಲ್ಲಿ ಇಲ್ಲವಾದರೂ, ಸಿದ್ಧಗಂಗಾ ಶ್ರೀಗಳಿಗೆ ಕೋಲಾರ ಜಿಲ್ಲೆಯಲ್ಲಿ ಅಪಾರ ಭಕ್ತ ವೃಂದವಿದೆ. ಭಕ್ತವೃಂದ ಪ್ರೀತಿಯಿಂದ ಕರೆದಾಗಲೆಲ್ಲಾ ಕೋಲಾರ, ಬಂಗಾರಪೇಟೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಬಡವ ಬಲ್ಲಿದರೆಂಬ ಭೇದ ನೋಡದೆ ಅವರ ಮನೆಗಳಲ್ಲಿ ಶಿವಪೂಜೆ ಮಾಡಿ, ಪಾದಪೂಜೆ ಸ್ಪೀಕರಿಸಿ ತೆರಳುತ್ತಿದ್ದರು. ಕೋಲಾರ ಜಿಲ್ಲೆಯ ನೂರಾರು ಮಂದಿ ತುಮಕೂರು ಮಠದಲ್ಲಿ ವ್ಯಾಸಾಂಗ ಮಾಡಿರುವುದು ಹಾಗೂ ಮಾಡುತ್ತಿರುವುದರಿಂದ ಶ್ರೀಗಳ ಬಗ್ಗೆ ಕೋಲಾರ ಜಿಲ್ಲೆಯ ಭಕ್ತವೃಂದಗೂ ಅಪಾರ ಅಭಿಮಾನವಿದೆ.

Advertisement

ನಾಲ್ಕೈದು ದಶಕಗಳ ಸಂಬಂಧ: ಸಿದ್ಧಗಂಗಾ ಶ್ರೀಗಳಿಗೂ ತಮಗೂ ಸುಮಾರು 45 ವರ್ಷಗಳ ಸಂಬಂಧ ಎಂದು ಕೋಲಾರದ ಶರಣ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ ಸ್ಮರಿಸಿಕೊಳ್ಳುತ್ತಾರೆ. ನಾಲ್ಕು ದಶಕಗಳ ಹಿಂದೆ ವಿಶ್ವ ಹಿಂದೂ ಪರಿಷತ್‌ ಕೋಲಾರಮ್ಮ ದೇವಾಲಯಕ್ಕೆ ಶ್ರೀಗಳನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸಿದ್ದರು. ಆಗ ಕೋರಿಕೆ ಮೇರೆಗೆ ತಮ್ಮ ಮನೆಗೂ ಭೇಟಿ ನೀಡಿದ್ದರು.

ಅಂದಿನಿಂದ ಕಳೆದ ಮೂರು ನಾಲ್ಕು ವರ್ಷಗಳವರೆಗೂ ತಮ್ಮ ಮನೆಗೆ ಅನೇಕ ಭಾರಿ ಶ್ರೀಗಳು ಭೇಟಿ ನೀಡಿ ಭಕ್ತರನ್ನು ಸಂತೃಪ್ತಗೊಳಿಸಿದ್ದಾರೆ. ಕೋಲಾರ ಜಿಲ್ಲೆಯಿಂದ ತಾವು ಹಾಗೂ ಹರಿಕಥಾ ವಿದ್ವಾಂಸರಾದ ಜ್ಞಾನಮೂರ್ತಿಗಳನ್ನು ಸಿದ್ಧಗಂಗಾ ಮಠದ ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿಸಿಕೊಂಡಿರುವುದು ಅವರಿಗೆ ತಮ್ಮ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿಯೇ ತಾವು ಆಗಾಗ್ಗೆ ಮಠಕ್ಕೆ ತೆರಳಿ ಶ್ರೀಗಳೊಂದಿಗೆ ಗಂಟೆಗಟ್ಟಲೇ ಮಾತನಾಡಿದ್ದೆ ಎಂದು ಸ್ಮರಿಸಿಕೊಳ್ಳುತ್ತಾರೆ.

ಶೈಕ್ಷಣಿಕ ಸೇವೆಗೆ ಸ್ಫೂರ್ತಿ: ಸಿದ್ಧಗಂಗಾ ಮಠದ ಶಾಲೆಯಲ್ಲಿಯೇ ವ್ಯಾಸಾಂಗ ಮಾಡಿದ್ದು ತಮ್ಮ ಪುಣ್ಯ ಎಂದು ಸ್ಮರಿಸಿಕೊಳ್ಳುವ ಮಹಿಳಾ ಸಮಾಜ ಹಾಗೂ ದಾನಮ್ಮ ಚನ್ನಬಸಪ್ಪ ಸಂಸ್ಥೆಯಡಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಉಷಾಗಂಗಾಧರ್‌. ಕೋಲಾರ ಜಿಲ್ಲೆಯಲ್ಲಿ ತಾವು ಅನೇಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶೈಕ್ಷಣಿಕ ಸೇವೆ ಸಲ್ಲಿಸಲು ಶ್ರೀಗಳೇ ತಮಗೆ ಸ್ಫೂರ್ತಿ ಪ್ರೇರಣೆ. ತಮ್ಮ ಮನೆಗೆ ಶ್ರೀಗಳಿಗೆ ನೂರು ವರ್ಷ ತುಂಬುವ  ಸಂದರ್ಭದಲ್ಲಿ ಆಯೋಜಿಸಿದ್ದ ಗುರುಪೂಜೆಯೂ ಸೇರಿದಂತೆ ನಾಲ್ಕೈದು ಬಾರಿ ಕರೆಸಿ ಶಿವಪೂಜೆ, ಪಾದಪೂಜೆ ನೆರವೇರಿಸಿದ್ದು ಅವಿಸ್ಮರಣೀಯ ಎನ್ನುತ್ತಾರೆ. 

ನೆನಪಿನ ಶಕ್ತಿ ಆಗಾಧ: ಶ್ರೀಗಳ ನೆನಪಿನ ಶಕ್ತಿ ಅಗಾಧವಾದುದು ಎನ್ನುವುದನ್ನು ಮಠದ ಭಕ್ತರು  ಸ್ಮರಿಸಿಕೊಳ್ಳುತ್ತಾರೆ. ತಮ್ಮ ಹಿಂದಿನ ಭೇಟಿಯ ಸಂದರ್ಭದಲ್ಲಿ ನಡೆದ ಘಟನಾವಳಿ ಹಾಗೂ ಮಾತುಗಳನ್ನು  ಎಷ್ಟೋ ವರ್ಷಗಳು ಕಳೆದರೂ ಮುಂದಿನ ಭೇಟಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದುದು ಶ್ರೀಗಳ ನೆನಪಿನ ಶಕ್ತಿಗೆ ಉದಾಹರಣೆ ಎನ್ನುತ್ತಾರೆ ಉಷಾಗಂಗಾಧರ್‌. ಮೂರು ಬಾರಿ ತಮ್ಮ ಕೋಲಾರದ ಮನೆಗೆ ಶ್ರೀಗಳು ಆಗಮಿಸಿ ಶಿವಪೂಜೆ ನಡೆಸಿಕೊಟ್ಟಿದ್ದರು.

Advertisement

ಮಳೆಗಾಗಿ ಪ್ರಾರ್ಥಿಸಿ: ಸಿದ್ಧಗಂಗಾ ಮಠದ ಭಕ್ತರಾಗಿರುವ ಸಚ್ಚಿದಾನಂದರು ತಿಂಗಳಿಗೊಮ್ಮೆಯಾದರೂ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳನ್ನು ಮಾತನಾಡಿಸುವ ಸಂಪ್ರದಾಯ ಪಾಲಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮಠಕ್ಕೆ ತೆರಳಿದ್ದಾಗ ಅಚಾನಕ್‌ ಆಗಿ ಶ್ರೀಗಳು ಎದುರಾಗಿದ್ದರು. ಆಗ ಸಚ್ಚಿದಾನಂದ ಕೋಲಾರ ಜಿಲ್ಲೆಯಲ್ಲಿ ಮಳೆಯಿಲ್ಲದೆ ನೀರಿಗೆ ಹಾಹಾಕಾರ ಉಂಟಾಗಿದೆಯೆಂದು ವಿವರಿಸಿದ್ದರು.

ನಿಂತಲ್ಲಿಯೇ ಹತ್ತು ನಿಮಿಷ ಕಣ್ಣು ಮುಚ್ಚಿ ಪ್ರಾರ್ಥಿಸಿದ ನಂತರ ಶ್ರೀಗಳು ಮಳೆಗಾಗಿ ಎಲ್ಲರೂ ಪ್ರಾರ್ಥಿಸೋಣ ಖಂಡಿತ ಮಳೆ ಬರುತ್ತದೆ, ಯಾರೂ ಬೇಸರ ಪಟ್ಟುಕೊಳ್ಳುವುದು ಬೇಡ ಎಂಬ ಮಾತನ್ನಾಡಿದ್ದರು. ಇದಾದ ನಂತರ ಎರಡು ಮೂರು ವರ್ಷಗಳ ನಂತರ ಹೀಗೆ ಶ್ರೀಗಳು ಮುಖಾಮುಖೀಯಾದಾಗ ತಾವು ಕೋಲಾರದಿಂದ ಬಂದಿದ್ದಾಗಿ ಹೇಳುತ್ತಲೇ ಈಗ ಮಳೆ ಬರುತ್ತಿದೆಯೇ ಎಂದು ಶ್ರೀಗಳು ಕೇಳಿದ್ದನ್ನು ಸಚ್ಚಿದಾನಂದ ನೆನಪಿಸಿಕೊಳ್ಳುತ್ತಾರೆ.

ರಾಜಕೀಯ ಒಲ್ಲೆ ಎನ್ನುತ್ತಿದ್ದರು: ಸಿದ್ಧಗಂಗಾ ಮಠದ ಶ್ರೀಗಳು ಎಲ್ಲಾ ಭಕ್ತರನ್ನು ಸಮಾನವಾಗಿ ಕಾಣುತ್ತಿದ್ದರು. ಅವರ ಭಕ್ತರಲ್ಲಿ ಎಲ್ಲಾ ಪಕ್ಷದವರು ಇದ್ದರು. ಕೋಲಾರಕ್ಕೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಶ್ರೀಗಳನ್ನು ಪಿಟಿಐ ವರದಿಗಾರರಾಗಿದ್ದ ಬಿ.ಸುರೇಶ್‌, ವೀರಶೈವರನ್ನು ಟೀಕಿಸಿದ ರಾಜಕಾರಣಿಯೊಬ್ಬರ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಅಷ್ಟೇ ಸಾವಧಾನವಾಗಿ ಪ್ರತಿಕ್ರಿಯಿಸಿದ ಶ್ರೀಗಳು, ಅವರು ಟೀಕಿಸಿದ್ದನ್ನು ನೀವು ಕೇಳಿಸಿಕೊಂಡಿದ್ದೀರ, ಎಲ್ಲೋ ಯಾರೋ ಟೀಕಿಸಿದ್ದಕ್ಕೆಲ್ಲಾ ತಾವು ಉತ್ತರಿಸುವುದಿಲ್ಲವೆಂದು ಖಡಕ್‌ ಆಗಿ ಹೇಳುವ ಮೂಲಕ ರಾಜಕೀಯ ಒಲ್ಲೆ ಎಂದಿದ್ದರು.

ಭಕ್ತರ ಹಿತರಕ್ಷಕ: ಜಿಲ್ಲೆಯ ಹರಿಕಥಾ ವಿದ್ವಾನ್‌ ಜ್ಞಾನಮೂರ್ತಿಯವರ ಮೇಲೆ ಅವರ ರಾಮಸಂದ್ರ ಗ್ರಾಮದಲ್ಲಿ ಭೂವ್ಯಾಜ್ಯದ ಹಿನ್ನೆಲೆಯಲ್ಲಿ  ಹಲ್ಲೆ ನಡೆದಿತ್ತು. ಗಾಯಗೊಂಡಿದ್ದ ಜ್ಞಾನಮೂರ್ತಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವಿಷಯ ತಿಳಿದುಕೊಂಡ ಶ್ರೀಗಳು ಬಂಗಾರಪೇಟೆ ಕಾರ್ಯಕ್ರಮಕ್ಕೆ ಆಗಮಿಸಿ ನೇರವಾಗಿ ಆಸ್ಪತ್ರೆಗೆ ತೆರಳಿ ಜ್ಞಾನಮೂರ್ತಿಗಳ ಯೋಗಕ್ಷೇಮ ವಿಚಾರಿಸಿದ್ದರು. ಇದು ಶ್ರೀಗಳು ಭಕ್ತರ ರಕ್ಷಣೆಗೆ ನಿಲ್ಲುತ್ತಿದ್ದ ಪರಿಯಾಗಿತ್ತು.

ಸಾಂಸ್ಕೃತಿಕ ಪ್ರೇಮ: ಶ್ರೀಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ಕೋಲಾರ ಜಿಲ್ಲೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬಂದು ಹೋಗಿದ್ದರು. ಹರಿಕಥಾ ವಿದ್ವಾನ್‌ರ ಆಹ್ವಾನದ ಮೇರೆಗೆ ಸಿದ್ಧಗಂಗಾ ಮಠದ ನಾಟಕ ತಂಡವು ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಾಟಕ ಪ್ರದರ್ಶನವನ್ನು ಏರ್ಪಡಿಸುತ್ತಿತ್ತು. ಇಂಥ ಅನೇಕ ಸಂದರ್ಭಗಳಲ್ಲಿ ಶ್ರೀಗಳು ನಾಟಕ ತಂಡದೊಂದಿಗೆ ಇಡೀ ರಾತ್ರಿ ನಾಟಕ ವೀಕ್ಷಿಸುತ್ತಿದ್ದುದು ಅವರ ಕಲಾಸಕ್ತಿಗೆ ಸಾಕ್ಷಿಯಾಗಿತ್ತು.

ಮದುವೆಗೂ ಸಾಕ್ಷಿ: ಕೋಲಾರ ಜಿಲ್ಲೆಯ ಅನೇಕ ಮಂದಿ ಭಕ್ತರು ಸಿದ್ಧಗಂಗಾ ಮಠದೊಂದಿಗೆ ಸಂಬಂಧವನ್ನು ಹೊಂದಿದ್ದು, ತಮ್ಮ ಮನೆಯ ಶುಭ ಕಾರ್ಯಗಳನ್ನು ಮಠದಲ್ಲಿಯೇ ಶ್ರೀಗಳ ಸಮ್ಮುಖದಲ್ಲಿಯೇ ನಡೆಸಿದ್ದಾರೆ. ಪತ್ರಕರ್ತ ಜಗದೀಶ್‌ರ ಮದುವೆ ಮಠದಲ್ಲಿಯೇ ನಡೆದಿದ್ದು, ಶ್ರೀಗಳು ಅವರ ಮದುವೆಗೂ ಆಗಮಿಸಿ ಶುಭ ಹಾರೈಸಿದ್ದರು. ಸಚ್ಚಿದಾನಂದ ತಮ್ಮ ಮೊಮ್ಮಗಳ ನಾಮಕರಣವನ್ನು ತೀರಾ ಇತ್ತೀಚಿಗೆ ಮಠದಲ್ಲಿಯೇ ನಡೆಸಿಕೊಂಡು ಬಂದಿದ್ದರು. 

ನೆನಪಿನಲ್ಲಿ ಅಜರಾಮರ: ಜಿಲ್ಲೆಯಲ್ಲಿ ಸಿದ್ಧಗಂಗಾ ಮಠದ ಯಾವುದೇ ಶಾಖೆಗಳಿಲ್ಲದಿದ್ದರೂ ಶ್ರೀಗಳ ಜನ್ಮದಿನಾಚರಣೆಯನ್ನು ಗಾಂಧಿವನದಲ್ಲಿ ಆಳೆತ್ತರದ ಭಾವಚಿತ್ರವಿಟ್ಟು ಆಚರಿಸುವ ಸಂಪ್ರದಾಯವನ್ನು ಕಸಾಪ ನಿರ್ಗಮಿತ ಅಧ್ಯಕ್ಷ ಜೆ.ಜಿ.ನಾಗರಾಜ್‌ ಮತ್ತು ಕೋಲಾರದ ವೀರಶೈವ ಮುಖಂಡರು ನಡೆಸಿಕೊಂಡು ಬರುತ್ತಿದ್ದಾರೆ. ಕೋಲಾರ ಜಿಲ್ಲೆಯ ನೂರಾರು ಜನ ಮನಸ್ಸಿನಲ್ಲಿ ಶ್ರೀಗಳ ನೆನಪುಗಳು ಅಚ್ಚ ಹಸಿರಾಗಿಯೇ ಉಳಿದಿರುವುದು ಅವರು ಭಕ್ತರ ಮನದಲ್ಲಿ  ಅಜರಾಮರ  ಎನ್ನುವುದನ್ನು  ತೋರಿಸುತ್ತದೆ.

ಮುಸ್ಲಿಮರು ಶ್ರೀಗಳ ಭಕ್ತರು: ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮುಸ್ಲಿಮರು ಶ್ರೀಗಳ ಭಕ್ತರಾಗಿದ್ದಾರೆ. ಜಿಲ್ಲೆಯಿಂದ ಸಾಕಷ್ಟು ಬಡ ಮುಸ್ಲಿಂ ಕುಟುಂಬಗಳ ಮಕ್ಕಳು ತುಮಕೂರು ಮಠದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಮೂರು ನಾಲ್ಕು ದಶಕಗಳ ಹಿಂದೆ ಈದ್‌ಮಿಲಾದ್‌ ಹಬ್ಬದ ಮೆರವಣಿಗೆಯಲ್ಲಿ ಶ್ರೀಗಳನ್ನು ಪಾಲ್ಗೊಳ್ಳಬೇಕೆಂದು ಅಂಜುಮನ್‌ ಸಮಿತಿ ಮುಖ್ಯಸ್ಥರು ಮಠಕ್ಕೆ ತೆರಳಿ ಆಹ್ವಾನಿಸಿದ್ದರು. ಆದರೆ, ಶ್ರೀಗಳ ಆರೋಗ್ಯದಲ್ಲಿ ದಿಢೀರ್‌ ಏರುಪೇರು ಆಗಿದ್ದರಿಂದ ಅವರು ಈದ್‌ಮಿಲಾದ್‌ಗೆ ಬರಲಾಗಲಿಲ್ಲ.

ಸಿದ್ಧಗಂಗಾ ಹಿರಿಯ ಶ್ರೀಗಳ ಸ್ಫೂರ್ತಿಯಿಂದಲೇ ತಾವು ಕೋಲಾರ ಜಿಲ್ಲೆಯಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗಿದೆ. ಅವರ ಅಗಾಧ ನೆನಪಿನ ಶಕ್ತಿ ಅವರ್ಣನೀಯ.
-ಉಷಾಗಂಗಾಧರ್‌, ಎಸ್‌ಡಿಎ ಮತ್ತು ಮಹಿಳಾ ಸಮಾಜ ಅಧ್ಯಕ್ಷರು.

ಸಿದ್ಧಗಂಗಾ ಶ್ರೀಗಳೊಂದಿಗೆ ತಮ್ಮದು ನಾಲ್ಕು ದಶಕಗಳ ನಂಟು. ಕೋಲಾರಕ್ಕೆ ಹಾಗೂ ತಮ್ಮ ಮನೆಗೆ ಶ್ರೀಗಳು ಕರೆದಾಗಲೆಲ್ಲಾ ಆಗಮಿಸಿ ಶಿವಪೂಜೆ ಶುಭ ಕಾರ್ಯಗಳನ್ನು ನಡೆಸಿಕೊಟ್ಟಿದ್ದಾರೆ.
-ಬಿ.ಎಂ.ಚನ್ನಪ್ಪ, ಗೌರವಾಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ  ಪರಿಷತ್‌.

* ಕೆ.ಎಸ್‌.ಗಣೇಶ್‌ 

Advertisement

Udayavani is now on Telegram. Click here to join our channel and stay updated with the latest news.

Next