Advertisement

ಎನ್‌ಪಿಎಸ್‌ ವಿರುದ್ಧ ರಾಜಧಾನಿಗೆ ಪಾದಯಾತ್ರೆ ನಡೆಸಿ

12:30 PM Oct 09, 2017 | Team Udayavani |

ಧಾರವಾಡ: ಎನ್‌ಪಿಎಸ್‌ ಮುಂದಿನ ದಿನಗಳಲ್ಲಿ ನೌಕರರಿಗೆ ಮಾರಕವಾಗಲಿದ್ದು, ಹೀಗಾಗಿ ರಾಜ್ಯದ ಎಲ್ಲ ನೌಕರರು ಬೆಳಗಾವಿಯಿಂದ ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. 

Advertisement

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್‌ (ನೂತನ ಪಿಂಚಣಿ ಯೋಜನೆ) ನೌಕರರ ಸಂಘದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗದ ಮಟ್ಟದ ಎನ್‌ಪಿಎಸ್‌ ನೌಕರರ ಜಾಗೃತಿ ಸಮಾವೇಶ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು  ಮಾತನಾಡಿದರು. 

ಈ ಪ್ರತಿಭಟನೆಯಲ್ಲಿ ಕೆಲವರು ಮಾತ್ರವಲ್ಲದೇ ಎಲ್ಲರೂ ಭಾಗವಹಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಸಮಾವೇಶದಲ್ಲಿ ಗಂಭೀರ ಚರ್ಚೆಗಳನ್ನು ನಡೆಸಿ ಕೈಗೊಳ್ಳುವ ನಿರ್ಣಯದ ಮಾಹಿತಿ ನೀಡಿ, ಸಮಸ್ಯೆ ಪರಿಹಾರಕ್ಕೆ ಚರ್ಚಿಸುತ್ತೇನೆ ಎಂದು  ಭರವಸೆ ನೀಡಿದರು. 

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ನೌಕರರಿಗೆ ಪ್ರಯೋಜನವಾಗುವ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಕೇಂದ್ರ ಸರ್ಕಾರ ವ್ಯಾಪಾರ ಹಾಗೂ ಉದ್ಯಮಿಗಳ ಸರ್ಕಾರವಾಗಿದೆ. ಪ್ರಧಾನಮಂತ್ರಿ ಮೋದಿ ಅವರು ದೇಶದ ಅಭಿವೃದ್ಧಿ ಬಗ್ಗೆ ಭಾಷಣ ಮಾಡುತ್ತಾರೆ ಹೊರತು, ಹಳೇ ಪಿಂಚಣಿ ಯೋಜನೆ ಒಪ್ಪುವ ಕೆಲಸ ಮಾಡುತ್ತಿಲ್ಲ ಎಂದರು. 

ಎನ್‌ಪಿಎಸ್‌ ಸಂಘದ ಗೌರವ ಸಲಹೆಗಾರ ಎಸ್‌.ಎಸ್‌. ಹದ್ಲಿ ಮಾತನಾಡಿ, ನೌಕರರು ಯೋಜನೆಯ ಸಂಪೂರ್ಣ ಮಾಹಿತಿ ಅರಿಯಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಡೆಸಬಹುದು. ಹೊಸ ಯೋಜನೆಯಿಂದ ನಿವೃತ್ತಿ ನಂತರದಲ್ಲಿ ನೌಕರರು ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು. 

Advertisement

ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪಿ.ಎಫ್. ಗುಡೇನಕಟ್ಟಿ, ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಂ.ಎ., ರಾಜ್ಯ ಉಪಾಧ್ಯಕ್ಷ, ಸಿದ್ದಪ್ಪ ಸಂಗಣ್ಣವರ, ಸಂತೋಷ ಲಿಂಬಿಕಾಯಿ, ಮಲ್ಲಿಕಾರ್ಜುನ ಬರಗಿ, ಉಮೇಶ ತೋಟದ, ಜಿ.ಆರ್‌. ಭಟ್‌, ಅರವಿಂದ ಅಣ್ಣಿಗೇರ ಇದ್ದರು. ಯಲ್ಲಪ್ಪ ಕರೆಣ್ಣವರ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next