Advertisement

ಸಿಂಡಿಕೇಟ್‌ ಸದಸ್ಯರ ಜತೆ ವಾಲಾ ಚರ್ಚೆ

12:23 PM Jun 16, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ-2017ರಲ್ಲಿ ಕುಲಪತಿಗಳ ನೇಮಕ ವಿಚಾರ ಸೇರಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿರುವ ಪ್ರಸ್ತಾವಕ್ಕೆ ರಾಜ್ಯಪಾಲರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

ರಾಜ್ಯಪಾಲರಿಂದ ನಾಮನಿರ್ದೇಶಿತಗೊಂಡಿರುವ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಸಭೆ ರಾಜ್ಯಪಾಲರ ನೇತೃತ್ವದಲ್ಲಿ ಗುರುವಾರ ರಾಜಭವನದಲ್ಲಿ ನಡೆದಿದ್ದು, ಈ ವೇಳೆ ರಾಜ್ಯಪಾಲರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017ರ ಬಗ್ಗೆ ರಾಜ್ಯಪಾಲರು ಸಿಂಡಿಕೇಟ್‌ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ವಿಧೇಯಕದಲ್ಲಿರುವ ಉತ್ತಮ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ವಿಧೇಯಕ ರಾಜ್ಯಪಾಲರ ಸಹಿಯ ನಂತರವೇ ಅನುಷ್ಠಾನಕ್ಕೆ ಬರಬೇಕು ಎಂಬ ಅಂಶದ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸಿದ್ದಾರೆ ಎಂಬುದನ್ನು ಸಭೆಯಲ್ಲಿ ಹಾಜರಿದ್ದ ಸಿಂಡಿಕೇಟ್‌ ಸದಸ್ಯರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ರಾಜ್ಯಪಾಲರಿಂದ ನಾಮ ನಿರ್ದೇಶನ ಗೊಂಡಿರುವ ಸಿಂಡಿಕೇಟ್‌ ಸದಸ್ಯರ ಕಾರ್ಯವೈಖರಿ ಹೇಗಿರಬೇಕು ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಚರ್ಚೆಯ ಮಧ್ಯೆ ಸದಸ್ಯರೊಬ್ಬರು ರಾಜ್ಯ ಸರ್ಕಾರ ಮಂಡಿಸಿರುವ ವಿಧೇಯಕದ ಬಗ್ಗೆ ಪ್ರಸ್ತಾಪಿಸಿದ್ದರು.

ರಾಜ್ಯಪಾಲರು ಪ್ರತಿಕ್ರಿಯಿಸಿ, ವಿಧೇಯಕಕ್ಕೆ ಅಂತಿಮವಾಗಿ ರಾಜಭವನದಿಂದಲೇ ಅಂಕಿತವಾಗಬೇಕು. ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಹಾಗೂ ವಿದ್ಯಾರ್ಥಿಗಳ ಏಳ್ಗೆಗೆ ಬೇಕಾದ ಒಳ್ಳೆಯ ಅಂಶಗಳಿದ್ದರೆ ಖಂಡಿತವಾಗಿಯೂ ಸ್ವಾಗತಿಸುತ್ತೇವೆ. ಕೂಲಂಕುಷವಾಗಿ ಪರಿಶೀಲಿಸಿ, ಸಹಿ ಹಾಕಲಾಗುತ್ತದೆ. ವಿಶ್ವವಿದ್ಯಾಲಯವು ಯುಜಿಸಿ ನಿಯಮದಂತೆ ನಡೆಯಲಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.

Advertisement

ಸದಸ್ಯರಿಗೆ ಪಾಠ: ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿರುವ ಸಿಂಡಿಕೇಟ್‌ ಸದಸ್ಯರು ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಬೇಕು. ಆಡಳಿತಾತ್ಮಕ ಅಂಶಗಳ ಬಗ್ಗೆ ಗಮನ ಹರಿಸಬೇಕು. ಆದರೆ, ಅದನ್ನೇ ಮುಖ್ಯವಾಗಿಸಿಕೊಳ್ಳಬಾರದು. ವಿಶ್ವವಿದ್ಯಾಲಯದಿಂದ ಸಂಯೋಜನೆಗೊಂಡಿರುವ ಕಾಲೇಜುಗಳಿಗೆ, ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಬೇಕು.ಸಿಂಡಿಕೇಟ್‌ ಸಭೆಯಲ್ಲಿ ನೀವು ಮಂಡಿಸುವ ವಿಚಾರ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಪಾಲರು ಸದಸ್ಯರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next