Advertisement

Sagara: ನಗರಸಭೆ ಸಾಮಾನ್ಯ ಸಭೆ; ಲಲಿತಮ್ಮರ ತಡೆಯಾಜ್ಞೆ ವಿರುದ್ಧ ಸದಸ್ಯರ ತೀವ್ರ ಆಕ್ರೋಶ

05:34 PM Oct 09, 2024 | Kavyashree |

ಸಾಗರ: ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕ್ರಮದ ವಿರುದ್ದ ಅ.9ರ ಬುಧವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.

Advertisement

ಬಿಜೆಪಿ ಸದಸ್ಯರು ಲಲಿತಮ್ಮ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ನಗರದ 31 ವಾರ್ಡ್‌ಗಳ ಅಭಿವೃದ್ಧಿಗೆ ಲಲಿತಮ್ಮ ತಡೆಯಾಜ್ಞೆ ತಂದಿದ್ದು, ಅವರನ್ನು ಸಭೆಯಿಂದ ಹೊರಗೆ ಕಳುಹಿಸುವ ವಿಷಯದ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾಮನಿರ್ದೇಶನ ಸದಸ್ಯರು ಲಲಿತಮ್ಮ ಪರ ನಿಂತಿದ್ದು ಬಿಟ್ಟರೆ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು ನಿಲ್ಲದೆ ಇರುವುದು, ಇದು ಲಲಿತಮ್ಮ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದು ಬಿಜೆಪಿಗೆ ಹೆಚ್ಚಿನ ಪ್ರಹಾರ ಮಾಡಲು ಅವಕಾಶ ಸಿಕ್ಕಂತಾಯಿತು.

ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಟಿ.ಡಿ. ಮೇಘರಾಜ್, ನಗರಸಭೆಯಲ್ಲಿ ಸುಮಾರು 2 ವರ್ಷದಿಂದ ಚುನಾಯಿತ ಸದಸ್ಯರ ಆಡಳಿತವಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿ ಇನ್ನೇನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ ಎನ್ನುವ ಹೊತ್ತಿನಲ್ಲಿ ಕಾಂಗ್ರೆಸ್ ಸದಸ್ಯೆ ವೈಯಕ್ತಿಕ ಲಾಭಕ್ಕಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ನಗರವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದೆ. ಲಲಿತಮ್ಮ ಅವರು ತಡೆಯಾಜ್ಞೆ ತರುವ ಮೂಲಕ ನಗರದ ಜನರ ದೃಷ್ಟಿಯಲ್ಲಿ ಅಪರಾಧಿಯಾಗಿದ್ದಾರೆ. ಇಂತಹವರನ್ನು ಸಭೆಯಲ್ಲಿ ಕೂರಿಸಿಕೊಂಡು ವಿಷಯ ಚರ್ಚೆ ಮಾಡಲು ಸಾಧ್ಯವಿಲ್ಲ. ಅವರನ್ನು ಹೊರಗೆ ಕಳಿಸಿ, ನ್ಯಾಯಾಲಯಕ್ಕೆ ಯಾವ ರೀತಿ ಮರು ದಾವೆ ಹಾಕಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿ ಎಂದು ಒತ್ತಾಯಿಸಿದರು.

Advertisement

ಮೇಘರಾಜ್ ಮಾತಿಗೆ ಬಿಜೆಪಿ ಸದಸ್ಯರಾದ ಗಣೇಶಪ್ರಸಾದ್, ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್ ಇನ್ನಿತರರು ಸಾಥ್ ನೀಡಿದರು.

ತಮ್ಮನ್ನು ಅಪರಾಧಿ ಎಂದಿರುವುದರಿಂದ ಕೆಂಡಮಂಡಲವಾದ ಲಲಿತಮ್ಮ ಬಿಜೆಪಿ ಸದಸ್ಯರು ಕ್ಷಮೆ ಕೋರಬೇಕು ಎಂದು ಒತ್ತಾಯಿಸುವ ಜೊತೆಗೆ ತಾವು ಪಕ್ಷದ ನಿಲುವಿನಂತೆ ತಡೆಯಾಜ್ಞೆ ತಂದಿರುವುದಾಗಿ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದರು.

ಆದರೆ ಕಾಂಗ್ರೆಸ್ ಸದಸ್ಯರಾದ ಮಧುಮಾಲತಿ, ವಿ.ಶಂಕರ್ ಇನ್ನಿತರರು, ಇದು ಲಲಿತಮ್ಮ ಅವರ ವೈಯಕ್ತಿಕ ನಿಲುವು. ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ಬೆಂಬಲಕ್ಕೆ ನಿಲ್ಲಲಿಲ್ಲ. ಇದು ಬಿಜೆಪಿಗರ ಉತ್ಸಾಹ ಹೆಚ್ಚಿಸಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ, ಎಸಿ ಯತೀಶ್ ಆರ್., ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸ್ಥಳೀಯ ವಿಷಯ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಚಾರಣೆಯು ಅ. 14 ರಂದು ನಡೆಯಲಿದೆ. ವಿಷಯವನ್ನು ಇಲ್ಲಿಗೆ ಸಮಾಪ್ತಿಗೊಳಿಸುವಂತೆ ಮನವಿ ಮಾಡಿದರು.

ಸಭಾತ್ಯಾಗಕ್ಕೆ ಮುಂದಾದ ಪೌರಾಯುಕ್ತ: ಸೇಲ್ ಸರ್ಟಿಫಿಕೇಟ್ ಹಗರಣ ಮತ್ತು ಆಡಿಟ್ ವರದಿ ಬಗ್ಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಬಳಿ ಬಂದಾಗ ನಾಮ ನಿರ್ದೇಶನ ಸದಸ್ಯ ರವಿ ಲಿಂಗನಮಕ್ಕಿ ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರಿಗೆ ಬೆರಳು ತೋರಿಸಿ ಮಾತನಾಡುವ ಜೊತೆಗೆ ಸಭೆಗೆ ವಿಷಯ ತರದೆ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶಗೊಂಡ ಪೌರಾಯುಕ್ತ ಎಚ್.ಕೆ.ನಾಗಪ್ಪ ನಾಮ ನಿರ್ದೇಶನ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಮಾತನಾಡುತ್ತಿಲ್ಲ. ನಗರಸಭೆ ಕಚೇರಿಗೆ ಬಂದು ಪದೇ ಪದೇ ಕಿರಿಕಿರಿ ಮಾಡುವ ಜೊತೆಗೆ ಸಾಮಾನ್ಯ ಸಭೆಯಲ್ಲಿ ಕೈತೋರಿಸಿ ಮಾತನಾಡಿದ್ದಾರೆ. ಇದರಿಂದ ನನ್ನ ಹುದ್ದೆಗೆ ಅಗೌರವ ಸೂಚಿಸಿದಂತೆ ಆಗಿದೆ. ನಾನು ಸಭಾತ್ಯಾಗ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಮೇಘರಾಜ್ ಮತ್ತಿತರರು ಪೌರಾಯುಕ್ತರಿಗೆ ಅಪಮಾನ ಮಾಡಿರುವುದನ್ನು ಸಭೆಯಲ್ಲಿ ಖಂಡಿಸಿದರು. ಆಡಳಿತಾಧಿಕಾರಿಗಳ ಮಧ್ಯಪ್ರವೇಶದ ನಂತರ ಪ್ರಕರಣ ಸುಖಾಂತ್ಯ ಕಂಡಿತು.

ಸಭೆಯಲ್ಲಿ ಗಣಪತಿ ಮಂಡಗಳಲೆ, ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆ, ನಾಯಿಕಾಟ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ ಇನ್ನಿತರ ವಿಷಯಗಳ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ನಗರಸಭೆಯಲ್ಲಿ ಹಣದ ಕೊರತೆ ಇದೆಯಾ ಎಂದು ಪ್ರಶ್ನೆ ಮಾಡಿದರು.

ಆಡಳಿತಾಧಿಕಾರಿಗಳು ಸೇಲ್ ಸರ್ಟಿಫಿಕೇಟ್ ಹಗರಣ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸುತ್ತಾರೆ. ತನಿಖೆ ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next