ಸಾಗರ: ತಾನೇತಾನಾಗಿ ಕಲೆ ಸಾಹಿತ್ಯಗಳು ಒಲಿಯುವುದಿಲ್ಲ. ಒಂದು ಛಲ, ಗುರಿಗಳು ಇದ್ದರೆ ಸಾಧನೆ ಸಾಧ್ಯ ಎಂಬುದು ದೃಷ್ಟಾಂತಗಳಿಂದ ರುಜುವಾತಾಗುತ್ತಲೇ ಬಂದಿದೆ. ಪ್ರಯತ್ನ ಪಟ್ಟರೆ ಸಾಹಿತ್ಯ ಬರವಣಿಗೆ ಸಾಧ್ಯ. ವಿದ್ಯಾರ್ಥಿಗಳು ಬೇರೆಯವರ ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯ ಪ್ರಕಾರಗಳನ್ನು ಕಲಿಯಬೇಕು ಎಂದು
ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೊರಬ ರಸ್ತೆಯ ರಾಮಕೃಷ್ಣ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ 4ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಬರಿದಾಗದೇ ಬೆಳೆಯಬೇಕು. ಪರಿಸರ ನಾಶದ ಕುರಿತು ವಿದ್ಯಾರ್ಥಿಗಳು ಜಾಗೃತರಾಗಬೇಕು. ಎಲ್ಲಿಯವರೆಗೆ ನಾವು ಪರಿಸರ ಪ್ರಜ್ಞೆಯನ್ನು ಇಟ್ಟುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಬದುಕಿಗೆ ಅರ್ಥವಿಲ್ಲ. ಹಳಗನ್ನಡ ಕಾವ್ಯಗಳನ್ನು ಓದುವುದು
ಇಂದು ಮರೆಯಾಗುತ್ತಿದೆ. ಈ ಪ್ರಕಾರವನ್ನು ಉಳಿಸಿಕೊಳ್ಳಬೇಕು ಎಂದರು.
ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಕನ್ನಡ ಭಾಷೆಗೆ ಸಂಕಟ ಎದುರಾಗಿದೆ. ಎಲ್ಲೆಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇಂಗ್ಲಿಷ್ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಬೆಳೆದಿದೆ. 10ನೇ ತರಗತಿ ವರೆಗೆ ಕನ್ನಡ ಕಡ್ಡಾಯವಾಗಬೇಕು. ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಸರ್ಕಾರದ ಆರ್‌ಟಿಇ ವ್ಯವಸ್ಥೆಯಿಂದ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾಗಿದೆ. ಸರ್ಕಾರಿ ಶಾಲೆಯಲ್ಲಿ ಹೇಳುವ ನಲಿ-ಕಲಿ ಪಾಠದಿಂದ ಭಾಷೆ ಕಲಿಯಲು ಸಾಧ್ಯವಿಲ್ಲ.
ಸರ್ಕಾರದ ದ್ವಂದ್ವ ನೀತಿಯಿಂದ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ. ಎಲ್ಲ ಐಟಿಬಿಟಿ ಕಂಪನಿಗಳಲ್ಲೂ ಕನ್ನಡಿಗರಿಗೆ ಉದ್ಯೋಗಕ್ಕೆ ಆದ್ಯತೆ ಕೊಡಬೇಕು. ನಮ್ಮ ಭಾಷೆಗೆ ಗೌರವ ಕೊಡಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ತುಷಾರ್ ಅವರನ್ನು ಹಾಗೂ ಎಸ್‌ಎಸ್‌ಎಲ್‌ಸಿಯ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್, ಉಪಾಧ್ಯಕ್ಷೆ ಗ್ರೇಸಿ ಡಯಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್, ರಾಮಕೃಷ್ಣ ಶಾಲೆ ವ್ಯವಸ್ಥಾಪಕ ದೇವರಾಜ್, ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಎನ್. ಸುಂದರರಾಜ್, ಉಪಾಧ್ಯಕ್ಷ ತಿರುಮಲ ಮಾವಿನಕುಳಿ, ಶಾಲಾ ಮುಖ್ಯ ಶಿಕ್ಷಕ ಲೋಕೇಶ್, ಸವಿತಾ ದೇವರಾಜ್ ಮತ್ತಿತರರು ಇದ್ದರು. ಪರಿಷತ್ತಿನ ಅಧ್ಯಕ್ಷ ಎಸ್.ವಿ. ಹಿತಕರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಎಂ. ಗಣಪತಿ ಸ್ವಾಗತಿಸಿದರು. ಆಯಿಷಾಬಾನು ನಿರೂಪಿಸಿದರು.