ರಾಯಚೂರು: ಸಹಕಾರಿ ಬ್ಯಾಂಕ್‌ಗಳ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲವನ್ನೂ ಮನ್ನಾ ಮಾಡಬೇಕು ಹಾಗೂ ಮುಂಗಾರು, ಹಿಂಗಾರು ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿ ನಡೆಸಿ
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಫಸಲ್ ಬಿಮಾ ಯೋಜನೆಯಡಿ ರೈತರು ಹಣ ಪಾವತಿಸಿದ್ದಾರೆ. ಆದರೆ, ಈವರೆಗೂ ಯಾವ ರೈತರಿಗೂ ಪರಿಹಾರ ತಲುಪಿಲ್ಲ. ಈಗ ಪುನಃ ಹಣ ಕಟ್ಟುವಂತೆ ಪ್ರಕಟಣೆ ನೀಡಲಾಗಿದೆ. ಅದಕ್ಕೂ ಮೊದಲು ಕಳೆದ ಬಾರಿ ಕಟ್ಟಿದ ಹಣಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ರಾಜ್ಯದಲ್ಲಿ ಸತತ ಬರದಿಂದ ಅನ್ನದಾತರು ಕಂಗೆಟ್ಟಿದ್ದು, ಸಾಲದ
ಸುಳಿಗೆ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳಿಗೂ ನಿರೀಕ್ಷಿತ ಮಟ್ಟದ ಬೆಲೆ ಸಿಕ್ಕಿಲ್ಲ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಭೀಕರ ಬರವಿದ್ದು, ಸೂಕ್ತ ಪರಿಹಾರ
ನೀಡುವಂತೆ ಬರ ಅಧ್ಯಯನ ತಂಡ ವರದಿ ಸಲ್ಲಿಸಿದರೂ ಸರ್ಕಾರಗಳು ಮಾತ್ರ ರೈತರ ನೆರವಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ಸಹಕಾರ ಸಂಘಗಳಲ್ಲಿನ ರೈತರ ಉಳಿದ ಸಾಲ ಮನ್ನಾ ಮಾಡಬೇಕು. ಮುಂಗಾರು, ಹಿಂಗಾರು ಬೆಳೆ ನಷ್ಟ ಪರಿಹಾರ ಎಲ್ಲ ರೈತರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿದ ರೈತರಿಗೆ ಕೂಡಲೇ ವಿದ್ಯುತ್ ಪೂರೈಸಬೇಕು. ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆ ಹಗಲು ತ್ರಿಪೇಸ್ ವಿದ್ಯುತ್ ಪೂರೈಸಬೇಕು. ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಿದ ರೈತರಿಗೆ ಕೂಡಲೇ ಬಾಕಿ ಪಾವತಿಸಬೇಕು ಎಂಬುದು ಸೇರಿ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಲಕ್ಷಣಗೌಡ ಕಡಗಂದೊಡ್ಡಿ, ಸದಸ್ಯರಾದ ದೊಡ್ಡಬಸನಗೌಡ, ವಿ.ಭೀಮೇಶ್ವರರಾವ್, ಮಲ್ಲಣ್ಣ ದಿನ್ನಿ, ಜಯಪ್ಪಸ್ವಾಮಿ ಉಡಮಗಲ್, ಬಸವರಾಜ ಮಾಲಿಪಾಟೀಲ, ನರಸಪ್ಪ ಯಾದವ ಹೊಕ್ರಾಣಿ, ಸಿದ್ದರಾಮಯ್ಯ ಸ್ವಾಮಿ,
ಬೂದೆಯ್ಯಸ್ವಾಮಿ ಸೇರಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.