Advertisement

ಯಲಹಂಕದ ಪುಟ್ಟೇನಹಳ್ಳಿ ಕೆರೆಗೆ ಕಾಯಕಲ್ಪ

11:45 AM Aug 03, 2017 | Team Udayavani |

ಯಲಹಂಕ: ಯಲಹಂಕದಲ್ಲಿರುವ ಪುಟ್ಟೇನಹಳ್ಳಿ ಕೆರೆಯಲ್ಲಿ ದೇಶಿಯ ಮತ್ತು ವಿದೇಶದ 125ಕ್ಕೂ ಹೆಚ್ಚಿನ ಪಕ್ಷಿ ಸಂಕುಲಗಳಿದ್ದು ಬೆಂಗಳೂರು ನಗರದ ಏಕೈಕ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಣೆಯಾಗಿದೆ. ಹೀಗಾಗಿ ಕೆರೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ್‌ ರೈ ಹೇಳಿದ್ದಾರೆ. 

Advertisement

ಯಲಹಂಕದ ಪುಟ್ಟೇನಹಳ್ಳಿ ಕೆರೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ಕೆರೆ ಪುನಶ್ಚೇತನ ಮತ್ತು ಅಭಿವೃದ್ದಿಗಾಗಿ 9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮೂರು ವರ್ಷಗಳ ಅವಧಿಗೆ ತಜ್ಞರಿಂದ ಯೋಜನಾ ವರದಿಯನ್ನು ತಯಾರಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ,’ ಎಂದರು.

ಸರೋವರ ಅಭಿವೃದ್ದಿ ಪ್ರಾಧಿಕಾರ: ಕೆರೆಗಳನ್ನು ಅಭಿವೃದ್ದಿ ಪಡಿಸಲು ಸರ್ಕಾರ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ಕಾರ್ಪೊರೇಟ್‌ ಕಂಪನಿಗಳ ಸಹಕಾರ ಪಡೆದು ಒಪ್ಪಂದ ಮಾಡಿಕೊಳ್ಳಲಾಗುವುದು. ಈ ಪ್ರಾಧಿಕಾರಕ್ಕೆ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸಲಾಗಿದೆ. ಇದೇ ಮಾದರಿಯಲ್ಲಿ ಈಗಾಗಲೇ ಮೈಸೂರು ನಗರ ಪಾಲಿಕೆಯ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ,’ ಎಂದರು. 

ನೀರಿಗಾಗಿ ಅರಣ್ಯ: ಸಣ್ಣ ಗಿಡಗಳನ್ನು ಬೆಳೆಸಲು ಮತ್ತು ದೊಡ್ಡ ಗಿಡಗಳನ್ನು ಪೋಷಿಸಲು ಸರ್ಕಾರ “ನೀರಿಗಾಗಿ ಅರಣ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಈ ವರ್ಷ ರೂಪಿಸಿದೆ. ಈ ಯೋಜನೆಯಡಿ ಆರು ಕೋಟಿ ಗಿಡ ನೆಡುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. “ಒಂದು ಗಿಡ ಬೆಳೆಸಿ, ಉಳಿಸಿ ಪಾಪ ಮುಕ್ತರಾಗಬೇಕು,’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಡೆಹರಾಡೂನ್‌ನ  ಪರಿಸರ ಸಂಸ್ಥೆಯೊಂದು ಅಧ್ಯಯನ ನಡೆಸಿರುವಂತೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಹಸಿರು ಕವಚ 28,900 ಹೆಕ್ಟೇರ್‌  ಜಾಸ್ತಿಯಾಗಿದೆ. ಅರಣ್ಯ ಬೆಳೆಸುವುದರಲ್ಲಿ ನಾಗರಿಕರ ಸಹಕಾರವೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ವನ್ಯ ಜೀವಿ ಸಂರಕ್ಷಣೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು  ಹುಳುಗಳು, ಆನೆ, ಚಿರತೆ, ಸಿಂಗಲೀಕ(ಮಂಗ) ರಕ್ಷಣೆ ಮಡಲಾಗುತ್ತಿದೆ ಎಂದರು. 

Advertisement

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ ಪುಟ್ಟೇನಹಳ್ಳಿ ಕೆರೆಗೆ ಕೊಳಚೆ ನೀರು ಸೇರಿ, ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿತ್ತು. ಇದರಿಂದ ಪ್ರಾಣಿ ಸಂಕುಲಕ್ಕೂ ತೊಂದರೆಯಾಗಿತ್ತು. ಇನ್ನು ಮುಂದೆ ಜೀವ ಸಂಕುಲಗಳಿಗೆ ವಾಸಸ್ಥಾನ ಸಿಗಲಿದೆ. ಸುತ್ತಮುತ್ತಲಿನ ಜನತೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಸಚಿವ ಕೆ.ಜೆ. ಜಾರ್ಜ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಹರ್ಷವರ್ದನ್‌ ಮತ್ತಿತರರು ಹಾಜರಿದ್ದರು.

ಕೆರೆಯ ಅಭಿವೃದ್ಧಿಯ ವಿವರ
ಕೆರೆಯಲ್ಲಿನ ಹೂಳೆತ್ತುವುದು, ಗಿಡಘಂಟಿಗಳನ್ನು ತೆಗೆಯುವುದು, ತ್ಯಾಜ್ಯ ನೀರು ಕೆರೆ ಪ್ರವೇಶಿಸದಂತೆ ಕ್ರಮಕೈಗೊಳ್ಳುವುದು, ಕೆರೆಯಲ್ಲಿ ಆಮ್ಲಜನ ಪ್ರಮಾಣ ಹೆಚ್ಚಿಸಲು ಏರಿಯೇಷನ್‌ ವ್ಯವಸ್ಥೆ, ಕೆರೆಯ ಒತ್ತುವರಿ ತಡೆಯಲು ತಂತಿಬೇಲಿ ಅಳವಡಿಕೆ, ಕೆರೆಯ ಆವರಣದಲ್ಲಿ ಮಾಹಿತಿ ಕೇಂದ್ರ, ಲಾನ್‌ ಅಭಿವೃದ್ಧಿ, ಭದ್ರತಾ ಕೊಠಡಿ, ನಿರ್ವಹಣಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಭಾಜ್ಪೆ ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next