Advertisement
ಆದರೆ, ನಾಯಕರ ಈ ಆಫರ್ ಹಿರಿಯ ಶಾಸಕರಿಗೆ ನಂಬಿಕೆ ಮೂಡಿಸಿಲ್ಲ. ಇದು ಕಣ್ಣೊರೆಸುವ ತಂತ್ರ ಎಂಬ ಅಸಮಾಧಾನ ಹೊರ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಸಚಿವ ಸ್ಥಾನ ವಂಚಿತರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಇಂತದ್ದೊಂದು ಆಫರ್ ನೀಡಿದ್ದರು. ಆ ನಂತರ ಬಿಜೆಪಿಯ ಆಪರೇಷನ್ ಕಮಲದ ಯತ್ನ, ಕಾಂಗ್ರೆಸ್ ಶಾಸಕರಿಂದ ನಿರಂತರ ಬಂಡಾಯ ಮುಂದುವರಿದಿದೆ.
Related Articles
Advertisement
ಅತೃಪ್ತ ಶಾಸಕರ ಒತ್ತಡಕ್ಕೆ ಸಂಪುಟ ಪುನಾರಚನೆಗೆ ಮುಂದಾಗಿದ್ದ ರಾಜ್ಯ ನಾಯಕರ ಪ್ರಯತ್ನಕ್ಕೆ ಹಾಲಿ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಒಂದು ವರ್ಷದಲ್ಲಿ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡಲು ಆಗಿಲ್ಲ. ಅದರಲ್ಲೂ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರ ಇಲಾಖೆಗಳಿಗೆ ಪ್ರಾತಿನಿಧ್ಯ ದೊರೆಯದೇ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ.
ಈ ಮಧ್ಯೆಲೋಕಸಭೆ ಚುನಾವಣೆ ಬಂದಿದ್ದರಿಂದ ನಮ್ಮ ಇಲಾಖೆಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುವುದರ ಜತೆಗೆ ಸಚಿವರಾಗಿ ಕಾರ್ಯ ನಿರ್ವಹಿಸಲು ಇನ್ನಷ್ಟು ಸಮಯ ನೀಡುವಂತೆ ಕೇಳಿಕೊಂಡಿದ್ದರು.
ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಸಂಪುಟ ಪುನಾರಚನೆ ಕಸರತ್ತು ಕೈ ಬಿಟ್ಟು ಪಕ್ಷೇತರರನ್ನು ಉಳಿಸಿಕೊಂಡು ಸರ್ಕಾರ ರಕ್ಷಿಸಿಕೊಳ್ಳಲು ವಿಸ್ತರಣೆ ಮೊರೆ ಹೋಗಿದ್ದಾರೆ. ರಾಜ್ಯ ನಾಯಕರ ನಿರ್ಧಾರದಿಂದ ಅಸಮಾಧಾನ, ಆಕ್ರೋಶ ಹೊರ ಹಾಕುತ್ತಿರುವ ಶಾಸಕರಿಗೆ 3 ವರ್ಷದ ಮಂತ್ರಿ ಸ್ಥಾನದ ಭರವಸೆ ನೀಡುವ ಮೂಲಕ ಸಮಾಧಾನ ಪಡಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆಕಾಂಕ್ಷಿಗಳಿಗೆ ಆತಂಕ: ಮೈತ್ರಿ ಸರ್ಕಾರ ತಂತಿಯ ಮೇಲೆ ನಡೆಯುತ್ತಿರುವುದರಿಂದ ಯಾವಾಗ ಪತನವಾಗುತ್ತದೆಯೋ ಎಂಬ ಆತಂಕದಲ್ಲಿ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಕಾತರದಿಂದ ಕಾಯುತ್ತಿದ್ದು, ರಾಜ್ಯ ನಾಯಕರ ಸಮಾಧಾನದ ಮಾತುಗಳ ಮೇಲೆ ಸಚಿವಾಕಾಂಕ್ಷಿಗಳಿಗೆ ನಂಬಿಕೆಯಿಲ್ಲ. ಒಂದು ವರ್ಷದ ನಂತರ ರಾಜ್ಯದಲ್ಲಿ ರಾಜಕೀಯ ವಾತಾವರಣ ಇದೇ ರೀತಿ ಇರುತ್ತದೆ ಎನ್ನುವ ವಿಶ್ವಾಸವಿಲ್ಲ.
ಅಲ್ಲದೇ ಪಕ್ಷದ ಕೆಲವು ಬಂಡಾಯ ಶಾಸಕರೊಂದಿಗೆ ಬಿಜೆಪಿ ನಾಯಕರು ಈಗಲೂ ಸಂಪರ್ಕ ಇಟ್ಟುಕೊಂಡಿರುವುದರಿಂದ ಆಪರೇಷನ್ ಕಮಲ ಮಾಡಿದರೆ, ಸಚಿವರಾಗುವ ಕನಸಿಗೆ ಕಲ್ಲು ಬಿದ್ದಂತಾಗುತ್ತದೆಂಬ ಆತಂಕವನ್ನೂ ಕೆಲ ಶಾಸಕರು ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಎಲ್ಲರಿಗೂ ಅನ್ವಯದ ಅನುಮಾನ: ಮೊದಲ ಹಂತದಲ್ಲಿ ಸಚಿವರಾಗಿರುವವರನ್ನು ಎರಡು ವರ್ಷದ ಅವಧಿ ಮುಗಿದ ತಕ್ಷಣ ಬದಲಾಯಿಸಿ ಬೇರೆಯವರಿಗೆ ಅವಕಾಶ ನೀಡುವ ನಿಯಮ ಎಲ್ಲರಿಗೂ ಅನ್ವಯ ಆಗುತ್ತದೆಯಾ ಎಂಬ ಅನುಮಾನ ಕೆಲವು ಹಿರಿಯ ಶಾಸಕರಿಗಿದೆ. ಸಂಪುಟದ ಹಿರಿಯ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಅವರನ್ನು ಎರಡು ವರ್ಷ ಅವಧಿ ಮುಗಿದ ಮೇಲೆ ಸಂಪುಟದಿಂದ ಕೈ ಬಿಡಲು ಮುಂದಾದರೆ, ಅವರು ಧಾರಾಳತನದಿಂದ ಒಪ್ಪುತ್ತಾರಾ ಎನ್ನುವ ಅನುಮಾನ ಈ ಶಾಸಕರಿಗಿದೆ ಎಂದು ಹೇಳಲಾಗುತ್ತಿದೆ.