ಚಾಮರಾಜನಗರ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಸಂಬಂಧ ಆಚರಿಸಲಾಗುತ್ತಿರುವ ಜಾಗೃತಿ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೋಮವಾರ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಆಯೋಜಿಸಲಾಗಿರುವ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರತಿಜ್ಞಾ ವಿಧಿ: ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿ ಕಾವೇರಿ ಬೋಧಿಸಿದರು. ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಆಡಚಣೆಯಾಗಿದೆಯೆಂದು ನಾನು ನಂಬುತ್ತೇನೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನಾನು ನಂಬುತ್ತೇನೆ.
ಪ್ರತಿ ನಾಗರಿಕನು ಜಾಗರೂಕನಾಗಿದ್ದು ಎಲ್ಲಾ ಸಮಯದಲ್ಲೂ ಉನ್ನತ ಗುಣಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿರಬೇಕೆಂದು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಬೆಂಬಲಿಸಬೇಕೆಂದು ನಾನು ಅರಿತಿದ್ದೇನೆ ಎಂಬ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಲಂಚ ಪಡೆಯುವುದಿಲ್ಲ, ನೀಡುವುದಿಲ್ಲ: ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದೂ ಇಲ್ಲ, ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕ, ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ, ಸಾರ್ವಜನಿಕರ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ, ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರುತ್ತೇನೆ, ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದರು.
ಆಮಿಷಕ್ಕೊಳಗಾಗ ಬೇಡಿ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ, ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಮೈ ಗೂಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯನ್ನು ಮಾಡಬೇಕು. ಸರ್ಕಾರಿ ಕಚೇರಿಗಳಿಗೆ ಬಂದ ಜನ ಸಾಮಾನ್ಯರ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸದೇ ಯಾವುದೇ ಆಮಿಷಕ್ಕೊಳಗಾಗದೇ ನಿರ್ವಹಿಸಬೇಕು. ನ್ಯಾಯಯುತವಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಜನರ ಕೆಲಸ ಮಾಡಿ: ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರಿಗೆ ಸಬೂಬು, ವಾಯಿದೆ ಹೇಳದೇ ಅವರ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕು. ಹಾಗಾದಾಗ ಸರ್ಕಾರಿ ವ್ಯವಸ್ಥೆಯ ಬಗ್ಗೆ ಅವರಿಗೆ ಮೆಚ್ಚುಗೆ ಮೂಡುತ್ತದೆ ಎಂದು ಅವರು ಸಲಹೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.