ವಾಡಿ: ದಸರಾ ಹಬ್ಬದ ದೇವಿ ಮೆರವಣಿಗೆಗೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ ಎಚ್ಚರಿಕೆ ನೀಡಿದರು. ದಸರಾ ಹಬ್ಬದ ನಿಮಿತ್ತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೋಮು ಭಾವನೆ ಕೆರಳಿಸುವಂತ ಕಾರ್ಯಕ್ಕೆ ಯಾವುದೇ ಸಮುದಾಯ ಕೈ ಹಾಕಬಾರದು. ಆಯಾ ಸಮುದಾಯದ ಕಿಡಿಗೇಡಿಗಳನ್ನು ಆಯಾ ಸಮಾಜಗಳ ಮುಖಂಡರುಗಳೇ ನಿಯಂತ್ರಣ ಮಾಡಬೇಕು. ಕಾನೂನಿನ ಚೌಕಟ್ಟು ಮೀರಿ ವರ್ತಿಸಿದರೆ ಕಾನೂನಿನ ಪಾಠ ಕಲಿಸಬೇಕಾಗುತ್ತದೆ ಎಂದರು.
ಒಂಭತ್ತು ದಿನಗಳ ಉತ್ಸವ ಸುಸೂತ್ರವಾಗಿ ನಡೆಯಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ನಾಡದೇವಿ ಆರಾಧನೆ ನಿಮಿತ್ತ ಆಯೋಜನೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅತಿಥಿಗಳ ಭಾಷಣಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತದೆ. ಭಾಷಣದ ನೆಪದಲ್ಲಿ ಕೋಮು ಭಾವನೆ ಕೆರಳಿಸುವ ದುಸ್ಸಾಹಸ ಯಾರೂ ಮಾಡಬಾರದು. ಶಾಂತಿ ಕಾಪಾಡಿದರೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಲಿದೆ. ಅಶಾಂತಿ ಉಂಟುಮಾಡಿದರೆ ಕಾನೂನಿನ ಪುಟಗಳು ತೆರೆದುಕೊಳ್ಳುತ್ತವೆ ಎಂದು ವಿವರಿಸಿದರು.
ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, ದೇವಿ ಮೆರವಣಿಗೆ ಮಾರುಕಟ್ಟೆ ಪ್ರದೇಶದ ಅಂಬೇಡ್ಕರ್ ವೃತ್ತ ಹಾಗೂ ಮಸೀದಿ ಮಾರ್ಗವಾಗಿ ಸಾಗುತ್ತದೆ. ಈ ಹಿಂದೆ ಮಸೀದಿ ಹತ್ತಿರ ಮೆರವಣಿಗೆ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲೆಸೆದು ದೊಡ್ಡ ಗಲಾಟೆಗೆ ಕಾರಣವಾಗಿದ್ದರು. ಈ ಬಾರಿ ಹೆಚ್ಚಿನ ಭದ್ರತೆ ಒದಗಿಸಬೇಕು. ಕಿಡಿಗೇಡಿಗಳು ಯಾರೇ ಇರಲಿ ಅಂಥಹವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.
ಪಿಎಸ್‌ಐ ವಿಜಯಕುಮಾರ ಭಾವಗಿ ಪ್ರಾಸ್ತಾವಿಕ ಮಾತನಾಡಿದರು. ಮರಾಠಾ ಸಮಾಜದ ಅಧ್ಯಕ್ಷ ಅಶೋಕ ಪವಾರ, ದಲಿತ ಸಮಾಜದ ಮುಖಂಡ ಚಂದ್ರಸೇನ ಮೇನಗಾರ, ದೇವಿ ಉತ್ಸವ ಸಮಿತಿ ಮುಖಂಡರಾದ ಅಶೋಕ ಸೂರ್ಯವಂಶಿ, ಹರಿ ಗಲಾಂಡೆ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ, ಬಾಜಿರಾವ ಪವಾರ, ಸುನೀಲ ವರ್ಮಾ, ಶಿವರಾಮ ಪವಾರ, ಸಿದ್ದು ಪೂಜಾರಿ, ಝಹೂರ್ ಖಾನ್, ವಿಷ್ಣು ಸೂರ್ಯವಂಶಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಯಲಸತ್ತಿ, ಪೇದೆ ದತ್ತು ಜಾನೆ, ದೊಡ್ಡಪ್ಪ, ರಮೇಶ ಪಾಲ್ಗೊಂಡಿದ್ದರು.