ವಾಡಿ: ದುಡಿಮೆಗೆ ತಕ್ಕ ಸಂಬಳ ನೀಡುವಂತೆ ಬೇಡಿಕೆಯಿಟ್ಟ ರೈಲು ನಿಲ್ದಾಣ ಸಫಾಯಿ ಕಾರ್ಮಿಕರನ್ನು ಗುತ್ತಿಗೆದಾರ ಕೆಲಸದಿಂದಲೇ ಕಿತ್ತುಹಾಕಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಕಳೆದ ಎರಡು ತಿಂಗಳಿಂದ ಕೆಲಸವಿಲ್ಲದೆ ಬೀದಿಗೆ ಬಿದ್ದು ಗೋಳಾಡುತ್ತಿರುವ ರೈಲ್ವೆ ಗುತ್ತಿಗೆ ಸಫಾಯಿ ಕಾರ್ಮಿಕರು ದಯವಿಟ್ಟು ನ್ಯಾಯ ಒದಗಿಸಿಕೊಡಿ ಎಂದು ಕಣ್ಣೀರಿಡುತ್ತಿದ್ದಾರೆ.
ಸೋಮವಾರ ಪಟ್ಟಣದ ರೈಲು ನಿಲ್ದಾಣ ಪ್ರದೇಶದಲ್ಲಿ ದಲಿತ ಸೇನೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಜಮಾಯಿಸಿದ್ದ ಮೂವತ್ತಕ್ಕೂ ಹೆಚ್ಚು ಜನ ರೈಲು ನಿಲ್ದಾಣದ ಗುತ್ತಿಗೆ ಸಫಾಯಿ ಕಾರ್ಮಿಕರು, ಕೆಲಸದಿಂದ ತೆಗೆದುಹಾಕಿದ ತ್ರೀಸ್ಟಾರ್ ಗುತ್ತಿಗೆದಾರ ಮಾಲೀಕನ ವಿರುದ್ಧ ಸುದ್ದಿಗೋಷ್ಠಿ ನಡೆಸುವ ಮೂಲಕ ತಮ್ಮ ಅಳಲು ತೋಡಿಕೊಂಡರು.
ಕಳೆದ ಏಳೆಂಟು ವರ್ಷಗಳಿಂದ ವಾಡಿ ರೈಲು ನಿಲ್ದಾಣದಲ್ಲಿ ಗುತ್ತೆಗೆ ಸಫಾಯಿ ಕರ್ಮಚಾರಿಗಳಾಗಿ ದುಡಿಯುತ್ತಿದ್ದೇವೆ. ಗುತ್ತಿಗೆದಾರರು ಬದಲಾದರೂ ಕಾರ್ಮಿಕರನ್ನು ಬದಲಿಸುತ್ತಿರಲಿಲ್ಲ. ಆದರೆ ಪ್ರತಿಯೊಬ್ಬ ಗುತ್ತಿಗೆದಾರನೂ ಸಹ ನಮ್ಮ ಖಾತೆಗೆ ಪಾವತಿಯಾಗುತ್ತಿದ್ದ ಒಟ್ಟಾರೆ ಸಂಬಳದಲ್ಲಿ ಶೇ.೫೦ ರಷ್ಟು ವೇತನ ವಾಪಸ್ ಪಡೆಯುತ್ತಿದ್ದರು. ಈಗ ಹೊಸದಾಗಿ ಬಂದಿರುವ ತ್ರೀಸ್ಟಾರ್ ಗುತ್ತಿಗೆದಾರ ಕೂಡ ಅದೇ ಶೋಷಣೆ ಮುಂದುವರೆಸಿದ್ದಾನೆ. ಖಾತೆಗೆ ಜಮೆಯಾದ ವೇತನದಲ್ಲಿ ಗುತ್ತಿಗೆದಾರನಿಗೆ ಪಾಲು ಕೊಡಲೇಬೇಕು. ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ನೀಡಿದ್ದಾರೆ. ಪರಿಣಾಮ ಕಣ್ಣೀರು ಕಪಾಳಕ್ಕೆ ಸುರಿದರೂ ಸಂಬಳದಲ್ಲಿ ಕಮಿಷನ್ ವಾಪಸ್ ಕೊಟ್ಟಿದ್ದೇವೆ. ಕಾರ್ಮಿಕರು ರಜೆ ಪಡೆದ ದಿನಗಳನ್ನು ಸೇರಿಸಿಯೇ ಸಂಬಳ ಪಾವತಿಯಾಗುತ್ತಿತ್ತು. ಆದರೆ ರಜೆ ದಿನಗಳ ಸಂಬಳ ವಾಪಸ್ ಗುತ್ತಿಗೆದಾರನಿಗೆ ನೀಡಬೇಕು. ಸಂಬಳ ಕಡಿತದ ಮೋಸವನ್ನು ಪ್ರಶ್ನಿಸಿದರೆ ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಬೇರೆ ಕಾರ್ಮಿಕರನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ. ಗುತ್ತಿಗೆದಾರನ ಮೋಸದಿಂದ ನಮ್ಮ ಜೀವನ ನರಕವಾಗಿದೆ. ನಮಗೆ ನ್ಯಾಯ ಕೊಡಿಸುವವರು ಯಾರೂ ಇಲ್ಲ ಎಂದು ಮಹಿಳಾ ಕಾರ್ಮಿಕರು ದುಃಖ ಹೊರಹಾಕಿದರು.
ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ದಲಿತ ಸೇನೆಯ ಜಿಲ್ಲಾಧ್ಯಕ್ಷ, ನ್ಯಾಯವಾದಿ ಶ್ರವಣಕುಮಾರ ಮೊಸಲಗಿ, ರೈಲು ನಿಲ್ದಾಣದ ಸ್ವಚ್ಚತೆ ಮಾಡುತ್ತಿರುವ ಗುತ್ತಿಗೆ ಸಫಾಯಿ ಕಾರ್ಮಿಕರು ದಲಿತರಾಗಿದ್ದು, ಅತ್ಯಂತ ಬಡ ಕುಟುಂಬದವರಾಗಿದ್ದಾರೆ. ಇವರಿಗೆ ಸಿಗಬೇಕಾದ ಕಾನೂನುಬದ್ಧ ವೇತನ ನೀಡದೆ ಗುತ್ತಿಗೆದಾರ ವಂಚಿಸಿದ್ದಾನೆ. ಪಾವತಿಸಲಾದ ಸಂಬಳದಲ್ಲಿ ಕಮಿಷನ್ ವಾಪಸ್ ಪಡೆದು ದ್ರೋಹ ಮಾಡಿದ್ದಾನೆ. ಸಂಬಳ ಕಡಿತ ಮಾಡಬೇಡಿ ಎಂದು ಕೇಳಿದ್ದಕ್ಕೆ ಮೂವತ್ತು ಜನ ಕಾರ್ಮಿಕರನ್ನು ಕೆಲಸದಿಂದಲೇ ಕಿತ್ತುಹಾಕಿ ಅನ್ಯಾಯ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈಲ್ವೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು. ನಿರ್ಲಕ್ಷ್ಯ ವಹಸಿದರೆ ರೈಲ್ವೆ ನಿಲ್ದಾಣದ ತ್ರೀಸ್ಟಾರ್ ಗುತ್ತಿಗೆದಾರನ ವಿರುದ್ಧ ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ದಲಿತ ಸೇನೆಯ ನಗರ ಅಧ್ಯಕ್ಷ ರಘುವೀರ ಪವಾರ, ಐಎನ್‌ಟಿಯುಸಿ ಅಧ್ಯಕ್ಷ ರಾಮಮೂರ್ತಿ ಶ್ರೀಧರ ಚಿಟ್ಟೆಂಪಳ್ಳಿ ಇದ್ದರು.