ವಾಡಿ: ನಾಗಾವಿ ನಾಡು, ಗಲ್ಲು ಗಣಿಗಳ ತವರು, ಸಿಮೆಂಟ್ ಕಾಶಿ ಚಿತ್ತಾಪುರ ತಾಲೂಕಿಗೆ ಈ ವರ್ಷ ಎರಡು ರೀತಿಯಿಂದ ಹೊಡೆತ ಬಿದ್ದಿದೆ. ಒಂದೆಡೆ ಮನುಷ್ಯರಿಗೆ ಮಹಾಮಾರಿ ಕೋವಿಡ್ ಕಾಡುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.
ಬರದ ಛಾಯೆ ಮಧ್ಯೆ ತಾಲೂಕಿನ ಜನರು ಜೀವ ರಕ್ಷಣೆಗೆ ಪರದಾಡುವಂತಾಗಿದೆ. ಭೀಮಾ ಮತ್ತು ಕಾಗಿಣಾ ನದಿಗಳು ಬತ್ತಿದ್ದರಿಂದ ವಾಡಿ, ನಾಲವಾರ, ಚಿತ್ತಾಪುರ ಹೋಬಳಿ ವ್ಯಾಪ್ತಿಯ ಅಡವಿಗಳಲ್ಲಿ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಹಸಿದ ಹಸುಗಳ ದಂಡು ಆಹಾರಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಿವೆ. ಹಳಕರ್ಟಿ, ಲಾಡ್ಲಾಪುರ, ಕಮರವಾಡಿ, ಅಳ್ಳೊಳ್ಳಿ, ಕುಂಬಾರಹಳ್ಳಿ, ಸ್ಟೇಷನ್ ತಾಂಡಾ, ಬಳವಡಗಿ, ಕೊಂಚೂರು ಭಾಗದ ಅಡವಿಗಳಲ್ಲಿ ಜಾನುವಾರುಗಳು ಮೇವಿನ ಹಾಹಾಕಾರ ಎದುರಿಸುತ್ತಿವೆ.
ಬೇಸಿಗೆ ಕಳೆಯಲು ರಸ್ತೆಗಳ ಬದಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಗ್ರಾಪಂ ಆಡಳಿತಗಳಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಕಚೇರಿ ಕಡತಗಳಲ್ಲಿ ವರದಿಯೂ ದಾಖಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ತೊಟ್ಟಿಗಳೇ ಕಾಣಸಿಗುವುದಿಲ್ಲ. ಅಲ್ಲೊಂದು ಇಲ್ಲೊಂದು ಕಂಡರೂ ಅವುಗಳಲ್ಲಿ ನೀರಿಲ್ಲ. ಜೋಳದ ಹೊಲಗಳಲ್ಲಿ ಕಣಕಿ ಬಣವೆಗಳನ್ನು ನಿರ್ಮಿಸಲಾಗಿದ್ದು, ಬೀಡಾಡಿ ದನಗಳಿಂದ ಮೇವು ರಕ್ಷಣೆಗೆ ಜಮೀನುದಾರರ ಆಳುಗಳು ಹೊಲ ಕಾಯುತ್ತಿದ್ದಾರೆ. ಮೇವಿಲ್ಲದ ಅಡವಿಯಲ್ಲಿ ಹಸುಗಳು ಮಣ್ಣು ಮೂಸಿ ನೋಡುತ್ತಿರುವ ಚಿಂತಾಜನಕ ದೃಶ್ಯಗಳು ಗೋಚರಿಸುತ್ತಿವೆ.
ಈ ವಿಷಯ ತಿಳಿದ ಶಾಸಕ ಪ್ರಿಯಾಂಕ್ ಖರ್ಗೆ ಸರಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಚಿತ್ತಾಪುರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸರಕಾರ ಇನ್ನೂ ಸ್ಪಂದಿಸಿಲ್ಲ. ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡ್ಡಾಯವಾಗಿ ನೀರಿನ ತೊಟ್ಟಿಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ಅವುಗಳಿಗೆ ನಿತ್ಯ ನೀರು ತುಂಬಿಸಬೇಕು ಎಂದು ರೈತ ಕೃಷಿ ಕಾರ್ಮಿಕ ಸಂಘ (ಆರ್‌ಕೆಎಸ್) ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ ಆಗ್ರಹಿಸಿದ್ದಾರೆ.