Advertisement
ವಾಡಿ: ಒಂದೆಡೆ ಸಾಂಕ್ರಾಮಿಕ ರೋಗ ಕೋವಿಡ್ಹರಡುವ ಆತಂಕ. ಇನ್ನೊಂದೆಡೆ ಮೈ ಬೆವರಳಿಸುವ ಖಡಕ್ ಬಿಸಿಲು. ಇವುಗಳ ನಡುವೆ ಸೋಂಕುತಡೆಗಟ್ಟುವ ಕಾನೂನು ಕಟ್ಟಪ್ಪಣೆ ಬೇರೆ. ಇಂತಹ ಸಂಕಷ್ಟದ ಗಳಿಗೆಯಲ್ಲಿ ಸಿಕ್ಕು ಬಣ್ಣದಾಟ ಅಕ್ಷರಶಃ ಕಳೆಗುಂದಿತ್ತು.
ಸಾರ್ವಜನಿಕರಿಗೆ ಬಣ್ಣ ಎರಚುವುದನ್ನು ಬಿಟ್ಟು ಗಲ್ಲಿ ರಸ್ತೆಯ ಮನೆಯಂಗಳದಲ್ಲಿಯೇ ರಂಗಿನಾಟಕ್ಕೆ ಚಾಲನೆ ನೀಡಿದ್ದು ಎಲ್ಲೆಡೆ ಕಂಡುಬಂದಿತು. ಬೆಳ್ಳಂಬೆಳಗ್ಗೆ ಒಂದು ತಾಸು ಅಲ್ಲಲ್ಲಿ ಜನರು ಬಣ್ಣದಲ್ಲಿ ಮಿಂದು ಸಂಭ್ರಮಿಸಿದ್ದು ಗೋಚರಿಸಿತು. ಹೊತ್ತು ನೆತ್ತಿಗೇರುವ ಮೊದಲೇ ರಂಗಿನಾಟ ಕೈಬಿಟ್ಟ
ಸಾರ್ವಜನಿಕರು ಸ್ನಾನಕ್ಕೆ ಮುಂದಾದರೆ, ಯುವಕರು ಬಣ್ಣ ತೊಳೆದುಕೊಳ್ಳಲು ಕಾಗಿಣಾ ಮತ್ತು ಭೀಮಾ ನದಿಗಳತ್ತ ಮುಖಮಾಡಿದರು. ಯುವಕರ ತಂಡದ ಬಣ್ಣದಾಟ ಕಡಿಮೆ ಸಮಯದಲ್ಲಿ ಕೊನೆಗೊಳ್ಳಲು ಬೆಳಗ್ಗೆ 8 ಗಂಟೆ ವೇಳೆಯೇ ಮೈಸುಡುವಂತಿದ್ದ ರಣಬಿಸಿಲು ಪ್ರಮುಖ ಕಾರಣ. ಬೈಕ್ ಮೇಲೆ ಓಡಾಡುತ್ತಿದ್ದ ಹುಡುಗರು ಬಿಟ್ಟರೆ ಬಣ್ಣದಾಟದಲ್ಲಿ ನಿರತರಾದವರ ಸಂಖ್ಯೆ ಬಲು ವಿರಳವಾಗಿತ್ತು. ದೊಡ್ಡವರಿಗಿಂತ ಮಕ್ಕಳಾಟವೇ ಜೋರಾಗಿತ್ತು. ನಂತರ ನಗರದ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಭಣಗುಡುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವೂ ಇಲ್ಲವಾಗಿತ್ತು.
Related Articles
Advertisement