ದುಬೈ: ಐಸಿಸಿ ಟಿ20 ವಿಶ್ವಕಪ್ ನ ಎರಡನೇ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ಥಾನವನ್ನು ಸೋಲಿಸಿ ಫೈನಲ್ ತಲುಪಿದೆ. ಪಂದ್ಯ ಗೆಲ್ಲುವ ಫೇವರೇಟ್ ಆಗಿದ್ದ ಪಾಕಿಸ್ಥಾನವನ್ನು ಐದು ವಿಕೆಟ್ ಗಳ ಅಂತರದಿಂದ ಸೋಲಿಸಿದ ಆ್ಯರೋನ್ ಫಿಂಚ್ ಪಡೆ ಮೊದಲ ಕಪ್ ಗೆಲ್ಲುವ ಸನಿಹದಲ್ಲಿದೆ.
ಗೆಲುವಿಗೆ 177 ರನ್ ಗುರಿ ಪಡೆದ ಆಸೀಸ್ ಒಂದು ಹಂತದಲ್ಲಿ ಸಂಕಷ್ಟದಲ್ಲಿತ್ತು. 12 ಓವರ್ ವೇಳೆ 96 ರನ್ ಗೆ ಐದು ವಿಕೆಟ್ ಕಳೆದುಕೊಂಡಾಗಿತ್ತು. ಕೊನೆಯ ಬ್ಯಾಟಿಂಗ್ ಸ್ಪೆಷಲಿಸ್ಟ್ ಜೋಡಿ ಕ್ರೀಸ್ ನಲ್ಲಿತ್ತು. ಆದರೆ ಛಲ ಬಿಡದೆ ಹೋರಾಡಿದ ಮಾರ್ಕಸ್ ಸ್ಟೋಯಿನಸ್ ಮತ್ತು ಮ್ಯಾಥ್ಯೂ ವೇಡ್ ಅಜೇಯ 81 ರನ್ ಜೊತೆಯಾಟ ಆಡಿದರು.
10 ಎಸೆತದಲ್ಲಿ 20 ರನ್ ಬೇಕಾಗಿದ್ದಾಗ ಅಫ್ರದಿ ಎಸೆತವನ್ನು ವೇಡ್ ಡೀಪ್ ಮಿಡ್ ವಿಕೆಟ್ ಗೆ ಬಾರಿಸಿದರು. ಆದರೆ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಸನ್ ಅಲಿ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ಮ್ಯಾಥ್ಯೂ ವೇಡ್ ಮುಂದಿನ ಮೂರು ಎಸೆತದಲ್ಲಿ ಮೂರು ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು.
ವೇಡ್ 17 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರೆ, ಮಾರ್ಕಸ್ ಸ್ಟೋಯಿನಸ್ 31 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಆಸ್ಟ್ರೇಲಿಯಾ ತಂಡವು ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.