Advertisement

ಎಂಜಿನಿಯರಿಂಗ್‌: ಮನೆಯಿಂದಲೇ ಇಂಟರ್ನ್ಶಿಪ್‌ : ಕೋವಿಡ್ ಹಿನ್ನೆಲೆ VTUನಿಂದ ಮಹತ್ವದ ನಿರ್ಧಾರ

11:57 PM Aug 06, 2021 | Team Udayavani |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್‌ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಸಕ್ತ ಸಾಲಿಗೆ ಅನ್ವಯಿಸುವಂತೆ ವಿಶೇಷ ನಿರ್ಧಾರ ತೆಗೆದು ಕೊಂಡಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ ವ್ಯವಸ್ಥೆ ಮೂಲಕ ಮನೆಯಿಂದಲೇ ಇಂಟರ್ನ್ಶಿಪ್‌ ಮಾಡಲು ಅವಕಾಶ ಕಲ್ಪಿಸಿದೆ.

Advertisement

ಹಾಗೆಯೇ ಇಂಟರ್ನ್ಶಿಪ್‌ ಪೂರಕ ಚಟುವಟಿಕೆಗಳನ್ನು ಡಿಜಿಟಲ್‌ ವ್ಯವಸ್ಥೆ ಅಥವಾ ಮನೆಯಿಂದಲೇ ಮಾಡಬಹುದಾಗಿದೆ ಎಂದು ವಿಟಿಯು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದರ ಜತೆಗೆ ಉದ್ಯೋಗದಾತ ಸಂಸ್ಥೆಗಳು ಈ ವಿದ್ಯಾರ್ಥಿಗಳನ್ನು ವರ್ಕ್‌ ಫ್ರಂ ಹೋಮ್‌ ಅಥವಾ ಡಿಜಿಟಲ್‌ ವೇದಿಕೆಗೆ ಅನುಗುಣವಾಗಿ ಇಂಟರ್ನಿಯಾಗಿ ತೊಡಗಿಸಿಕೊಳ್ಳಬಹುದಾಗಿದೆ. ಇಂಟರ್ನ್ ಶಿಪ್‌ಗೆ ನಿಗದಿಪಡಿಸಿರುವ ಕಾಲಾವಕಾಶವನ್ನು ಕಡಿಮೆ ಮಾಡಲಾಗಿದೆ. ಅಸೈನ್‌ಮೆಂಟ್‌ಗಳ ಜತೆಗೆ ಇಂಟರ್ನ್ ಶಿಪ್‌ ಸೇರಿಸುವ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ವಿಟಿಯು ಕುಲಪತಿ ಡಾ| ಕರಿಸಿದ್ದಪ್ಪ ವಿವರ ನೀಡಿದ್ದಾರೆ.

ಹಳೇ ವಿದ್ಯಾರ್ಥಿಗಳಿಗೆ ಒಂದು ಅವಕಾಶ
ಸದ್ಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ಆಧಾರಿತ ಸೆಮಿಸ್ಟರ್‌ ಪದ್ಧತಿಯಿದೆ. 2006, 2010 ಮತ್ತು 2014ರಲ್ಲಿ ಎಂಜಿನಿಯರಿಂಗ್‌ ಸೇರಿದವರಿಗೆ ಈ ವ್ಯವಸ್ಥೆ ಇರಲಿಲ್ಲ. ಆಗ ಎಂಜಿನಿಯರಿಂಗ್‌ಗೆ ದಾಖಲಾಗಿ, ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಲು ಸಾಧ್ಯವಾಗದವರಿಗೆ ಒಂದು ಅವಧಿಯ ಅವಕಾಶ ನೀಡುತ್ತಿದ್ದೇವೆ. ಅರ್ಹರು ಆಗಸ್ಟ್‌ ಅಥವಾ ಸೆಪ್ಟಂಬರ್‌ನಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಬಹುದು ಎಂದು ಅವರು ತಿಳಿಸಿದ್ದಾರೆ.

ಕ್ರೆಡಿಟ್‌ ಆಧಾರಿತ ಸೆಮಿಸ್ಟರ್‌ ವಿದ್ಯಾರ್ಥಿಗಳ ಬ್ಯಾಕ್‌ಲಾಗ್‌ ವಿಷಯಗಳ ಪರೀಕ್ಷೆಯನ್ನು ಎಂಜಿನಿ ಯರಿಂಗ್‌ ಪದವಿ ಮತ್ತು ಸ್ನಾತಕೋತ್ತರ ಪದವಿಗೂ ನಡೆಸಲು ನಿರ್ಧರಿಸಿದ್ದೇವೆ. ವಿಷಯ ಬ್ಯಾಕ್‌ಲಾಗ್‌ ಇರುವ ಕಾರಣಕ್ಕೆ ಮುಂದಿನ ಸೆಮಿಸ್ಟರ್‌ಗೆ
ದಾಖಲಾತಿ ಪಡೆಯಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದು. ಈ ಪರೀಕ್ಷೆಯನ್ನು ಸೆಪ್ಟಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಈ ವಿದ್ಯಾರ್ಥಿಗಳಿಗೆ ಅರ್ಹ ವಿಷಯದಲ್ಲಿ ಮುಂದಿನ ಸೆಮಿಸ್ಟರ್‌ಗೆ ನೋಂದಣಿ ಮಾಡಲು ಅವಕಾಶ ನೀಡಲು ವಿಟಿಯು ನಿರ್ಧರಿಸಿದೆ ಎಂದು ಡಾ| ಕರಿಸಿದ್ದಪ್ಪ ಹೇಳಿದ್ದಾರೆ.

Advertisement

ಕೊರೊನಾ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವಂತೆ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ. ಅದರಲ್ಲಿ ವಿದ್ಯಾರ್ಥಿಗಳ ಇಂಟರ್ನ್ಶಿಪ್‌ ಸೇರಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ವ್ಯವಸ್ಥೆಯಲ್ಲಿ ಮನೆಯಿಂದಲೇ ಇಂಟರ್ನ್ ಶಿಪ್‌ ಮಾಡಲು ಅವಕಾಶ ನೀಡಿದ್ದೇವೆ.
– ಡಾ| ಕರಿಸಿದ್ದಪ್ಪ , ವಿಟಿಯು ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next