ರಾಯಚೂರು: ರೈತರಿಗೆ ಹೆಚ್ಚುವರಿ ಸಾಲ ವಿತರಣೆಯಲ್ಲಿ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ವ್ಯವಸಾಯ ಸೇವಾ ಸಂಘ ಅಕ್ರಮ ಎಸಗಿದೆ ಎಂದು ಆರೋಪಿಸಿ ಮತ್ತು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೈದರಾಬಾದ್ ಕರ್ನಾಟಕ ರೈತ ಸಂಘದ ಹಿರೇಹೆಸರೂರು ಗ್ರಾಮ ಘಟಕ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದ ಸಂಘದ ಸದಸ್ಯರು, ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗೆಜ್ಜಲಗಟ್ಟಾ ವಿಎಸ್‌ಎಸ್‌ಎನ್‌ನಲ್ಲಿ 2016-17, 2017-18ನೇ ಸಾಲಿನಲ್ಲಿ ರೈತರಿಗೆ ಸಾಲ ವಿತರಣೆಯಲ್ಲಿ ಸಂಘದ ನಿರ್ದೇಶಕರು ಸಾಕಷ್ಟು ಅಕ್ರಮ ಎಸಗಿದ್ದಾರೆ. ತಮ್ಮ ಹೆಸರಿಗೆ ಹಾಗೂ ತಮ್ಮ ಸಂಬಂಧಿಕರ ಹೆಸರಿನಲ್ಲಿಯೇ ಸಾಲ ಪಡೆಯುವ ಮೂಲಕ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಎಸಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸತ್ತ ರೈತರ ಹೆಸರಿನಲ್ಲಿ ಕೂಡ ಸಾಲ ಪಡೆಯಲಾಗಿದೆ. ಇದರಿಂದ ಉಳಿದ ಅತೀ ಸಣ್ಣ ರೈತರಿಗೆ ಸಾಲ ನೀಡದೇ ವಂಚಿಸಲಾಗಿದೆ ಎಂದು ದೂರಿದರು.
ಹಿರೇಹೆಸರೂರು ಗ್ರಾಮದಲ್ಲಿ ಸಂಘದಲ್ಲಿ 310 ರೈತರು ಖಾತೆಗಳನ್ನು ಹೊಂದಿದ್ದಾರೆ. ಆದರೆ, 140 ರೈತರಿಗೆ ಮಾತ್ರ ಸಾಲ ವಿತರಿಸಲಾಗಿದೆ. ಉಳಿದ ರೈತರಿಗೆ ಸಾಲ ನೀಡದೇ ಸಂಘದ ನಿರ್ದೇಶಕರ ಸಂಬಂಧಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. ಅಲ್ಲದೇ ಮೈತಪಟ್ಟ ರೈತರ ಹೆಸರಿನ ಮೇಲೆ ಸಾಲ ನೀಡಲಾಗಿದೆ ಎಂದು ದೂರಿದರು.
ಕೂಡಲೇ ಈ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮದ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಸದಸ್ಯರಾದ ಮೌನೇಶ, ನಾಗರಾಜ, ರೆಡ್ಡಪ್ಪ, ಮಾದೆಪ್ಪ, ಹುಲ್ಲೇಶ, ವೀರಭದ್ರಯ್ಯ, ಸಂಗಪ್ಪ, ಆದೆಪ್ಪ, ಗಂಗಪ್ಪ, ಅಮರೇಶ, ನಾಗಪ್ಪ, ಅಮರೇಶಗೌಡ, ಶಂಕ್ರಪ್ಪ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.