Advertisement

ಸ್ವರವನ ಕರೆದಿದೆ…

10:29 AM Dec 22, 2019 | Lakshmi GovindaRaj |

ಧಾರವಾಡ ಸನಿಹದ ಹಳ್ಳಿಗೇರಿಯಲ್ಲಿರುವ ಸ್ವರವನದಲ್ಲಿ, ಒಂದೊಂದು ಸಂಗೀತೋಪಕರಣದ ಮೂಲ ಚಿಗುರುಗಳಿವೆ. 48 ವಾದ್ಯಗಳನ್ನು ತಯಾರಿಸುವ ವಿಶಿಷ್ಟ ಮರಗಳ ಸಸಿಗಳನ್ನು ನೆಡಲಾಗಿದೆ…

Advertisement

ಸುಶ್ರಾವ್ಯವಾಗಿ ಹಾಡುವ ಸಂಗೀತಗಾರ ಎದುರೇ ನಿಂತಿದ್ದಾನೆ. ಅವನ ರಚನೆಗಳೂ ಕಿವಿದುಂಬುತ್ತಿವೆ. ಆತ ಕೈಯಲ್ಲಿ ಹಿಡಿದ ಉಪಕರಣವೂ ಕಣ್ಣಿಗೆ ಬೀಳುತ್ತಿದೆ. ಆದರೆ, ಅವನು ನುಡಿಸುವ ಸೀತಾರ್‌, ವಯೋಲಿನ್‌, ತಬಲ, ತಂಬೂರಿಗಳನ್ನೆಲ್ಲ ಕೊಟ್ಟ ಮರ ಯಾವುದು ಎನ್ನುವುದು ಮಾತ್ರ ಅನೇಕರಿಗೆ ಗೊತ್ತಿರುವುದಿಲ್ಲ. ಆತ ನುಡಿಸುವ ಉಪಕರಣಗಳೆಲ್ಲ, ಉತ್ತರ ಭಾರತದಿಂದ ಬಂದಿದ್ದು ಎಂಬ ಸತ್ಯ ಗೊತ್ತಾದಾಗ, ನಮ್ಮಲ್ಲೇಕೆ ಅಂಥ ಮರಗಳಿಲ್ಲ ಎನ್ನುವ ಪುಟ್ಟ ನೋವೂ ಕಾಡದೇ ಇರದು. ಸಂಗೀತಲೋಕದ ಈ ಕೊರಗನ್ನು ದೂರಮಾಡಲೆಂದೇ, ಹುಟ್ಟಿಕೊಂಡಿದ್ದು “ಸ್ವರವನ’.

ಧಾರವಾಡದ ಸನಿಹದ ಹಳ್ಳಿಗೇರಿಯಲ್ಲಿ ಈ ವನವಿದೆ. ಇಲ್ಲಿರುವ ಸಸ್ಯಗಳೆಲ್ಲ, ಒಂದೊಂದು ಸಂಗೀತೋಪಕರಣದ ಮೂಲ ಚಿಗುರುಗಳು. ನೇಚರ್‌ ಫ‌ಸ್ಟ್‌ ಇಕೋ ವಿಲೇಜ್‌ನ ಸಂಸ್ಥಾಪಕ, ಪಂಚಾಕ್ಷರಯ್ಯ ವಿರೂಪಾಕ್ಷಯ್ಯ ಹಿರೇಮಠ ಅವರ ಕನಸಿನ ಯೋಜನೆ ಇದು. ಇಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೇರಿದಂತೆ, ಇತರೆ ಪ್ರಕಾರದ ಸಂಗೀತದಲ್ಲಿ ಬಳಕೆಯಾಗುವ ಪ್ರಮುಖ 58 ವಾದ್ಯ ಪ್ರಕಾರಗಳ ಪೈಕಿ, 48 ವಾದ್ಯಗಳನ್ನು ತಯಾರಿಸುವ ವಿಶಿಷ್ಟ ಮರಗಳ ಸಸಿಗಳನ್ನು ನೆಡಲಾಗಿದೆ. ಬಾಕಿ ಹತ್ತು ಸಸಿಗಳಿಗೆ ದೇಶಾದ್ಯಂತ ಹುಡುಕಾಟ ಸಾಗಿದೆ. ಸಂಗೀತಗಾರರ ಧ್ವನಿ ಮತ್ತು ಸ್ವರ ಶುದ್ಧಿ ಮಾಡುವ 10ಕ್ಕೂ ಹೆಚ್ಚು ಔಷಧೀಯ ಸಸ್ಯಗಳೂ ಈ ವನದಲ್ಲಿವೆ.

ಪಲ್ಲವಿ ಹಾಡಿದ “ಬೀಟೆ’: ಹೆಸರಾಂತ ವಯೋಲಿನ್‌ ವಾದಕ ದಂಪತಿಗಳಾದ ಪಂಡಿತ್‌ ಬಿ.ಎಸ್‌. ಮಠ ಹಾಗೂ ವಿದುಷಿ ಅಕ್ಕಮಹಾದೇವಿ ಮಠ ಅವರು ಬೀಟೆ ಸಸಿ ನೆಡುವ ಮೂಲಕ, ಇತ್ತೀಚೆಗೆ ಈ ಯೋಜನೆಗೆ ಚಾಲನೆ ಕೊಟ್ಟರು. ಬೀಟೆ ಮರ ಸೇರಿದಂತೆ, ಖೈರ, ಹಲಸು, ಕರಿಮತ್ತಿ, ಮದ್ದಾಲೆ, ತೆಂಗು, ನಂದಿ, ಹುಣಸೆ, ಗೊಜ್ಜಲು, ಧೂಪ, ಗೋ ಸಂಪಿಗೆ ಮರಗಳಿಂದ ಚಂಡೆ, ಮೃದಂಗ, ತಬಲಾ, ಡಮರುಗ, ಢಕ್ಕೆ, ಢೋಲಕ್‌, ಖಂಜಿರಾ ಮತ್ತು ಡೊಳ್ಳು ವಾದ್ಯಗಳು ರೂಪುಗೊಳ್ಳುತ್ತವೆ.

ಉತ್ತರದಿಂದ ದಕ್ಷಿಣಕೂ…: ಸಾಮಾನ್ಯವಾಗಿ ಸಾಗುವಾನಿ, ಮೇಪಲ್‌, ಪೈನ್‌ ಮರದಿಂದ ಪಿಟೀಲು, ಸಾರಂಗಿ ದಿಲ್‌ರುಬಾ, ಎಸ್‌ರಾಜಾ, ಕಾಮಾಯಿಚಾ ವಾದ್ಯಗಳನ್ನು ತಯಾರಿಸುತ್ತಾರೆ. ಈಗ ಈ ಉಪಕರಣಗಳನ್ನು ಉತ್ತರಭಾರತದಿಂದ ತರಿಸಿಕೊಳ್ಳುವ ಸ್ಥಿತಿಯಿದೆ. ಇಂಥ ಸಸಿಗಳಿಗೂ, ಸ್ವರವನ ಆಶ್ರಯ ಕೊಟ್ಟಿದೆ.

Advertisement

ಕೊಳಲಿನ ಬಿದಿರೂ…: ಉತ್ತರ ಪ್ರದೇಶದ ಫಿಲಿಭಿತ್‌ ಪ್ರದೇಶ, 8 ವಿಧದ ವಿಶಿಷ್ಟ ಬಗೆಯ ಕೊಳಲುಗಳಿಗೆ ಹೆಸರುವಾಸಿ. ಕೊಳಲು ತಯಾರಾಗುವ, ಬಿದಿರು ಮೆಳೆಗಳು ಅಲ್ಲಿ ಹೇರಳ. ಅಂಥ ಪ್ರಜಾತೀಯ ಎರಡು ಮೆಳೆಗಳೂ ಇಲ್ಲಿವೆ. ಬೈನೆ, ಅಡಕೆ, ಬೀಟೆ ಮತ್ತು ಕರಿಮತ್ತಿ ಸಸಿಗಳಿಂದ ಘನ ವಾದ್ಯಗಳಾದ ಕರತಾಳ, ದಾಂಡಿಯಾ ಮತ್ತು ಕಾಷ್ಠ ತರಂಗ ವಾದ್ಯಗಳು ತಯಾರಾಗುತ್ತವೆ. ಅವುಗಳನ್ನೂ ಇಲ್ಲಿ ಬೆಳೆಸಲಾಗಿದೆ.

ಕೋಲ್ಕತ್ತಾ ಸಾಧಕರ ಕೈಗುಣ: ಕೋಲ್ಕತ್ತಾದ ಖ್ಯಾತ ಗಾಯಕ ಕುಮಾರ ಮರಡೂರ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಟಾಪ್‌ ಶ್ರೇಣಿ ಗಾಯಕ, ಪಂಡಿತ ಸೋಮನಾಥ ಮರಡೂರ, ಮಹಾಗನಿಯನ್ನು ನೆಟ್ಟಿದ್ದಾರೆ. ಹಾಗೆ ನೆಡುವಾಗ, “ಎತ್ತಣ ಮಾಮರ, ಎತ್ತಣ ಕೋಗಿಲೆ’ ವಚನವನ್ನು ಅವರು ಹಾಡಿ, ಹರಸಿದರಂತೆ.

ಮಹಾಗನಿ ಮರ ಸೇರಿದಂತೆ, ಸಾಗುವಾನಿ, ಶಿವಣೆ, ಹಲಸು, ತುಮರಿ (ಬೀಡಿ ಕಟ್ಟುವ ಎಲೆ), ಎಬೋನಿ, ಸೋರೆಕಾಯಿ, ರಕ್ತ ಚಂದನ, ಸುರಹೊನ್ನೆ, ಮಾವು, ಮೇಪಲ್‌, ಚೆರ್ರಿ ಹಾಗೂ ಅರಳಿ ಮರದಿಂದ, ಸಿತಾರ್‌, ವೀಣೆ, ತಂಬೂರಿ, ಸಂತೂರ ಮತ್ತು ಏಕತಾರಿ ವಾದ್ಯಗಳು ತಯಾರಾಗುತ್ತವೆ. ಈ ವಾದ್ಯಗಳ ತಯಾರಿಕೆ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತೂ ಪಶ್ಚಿಮ ಬಂಗಾಳದಲ್ಲಿ ಗೃಹ ಉದ್ದಿಮೆಗಳೇ ಆಗಿವೆ.

ಶಿರಸಿಯ ಖ್ಯಾತ ಪರಿಸರ ತಜ್ಞ ಹಾಗೂ ಯೂತ್‌ ಫಾರ್‌ ಸೇವಾ ಉತ್ತರ ಕರ್ನಾಟಕದ ಸಂಯೋಜಕ ಉಮಾಪತಿ ಭಟ್‌ ಅವರ ಮಾರ್ಗದರ್ಶನದಲ್ಲಿ “ಸ್ವರ ವನ’ದ ನೀಲನಕ್ಷೆ ಸಿದ್ಧಗೊಂಡಿತು. ಒಟ್ಟು 10 ಗುಂಟೆ ಜಾಗದಲ್ಲಿ ವನ ಸ್ವರವನ ಹಬ್ಬಿಕೊಂಡಿದೆ. ಸಂಗೀತದ ತಪೋಭೂಮಿ ಆಗಿರುವ ಧಾರವಾಡ, ಇನ್ನು ಮುಂದೆ ಸ್ವರೋಪಕರಣಗಳ ಧಾಮವೂ ಆಗಬೇಕೆಂಬುದು, ಸ್ವರವನದ ಆಶಯ.

ಗಾಯಕರ ಸ್ವರ ಶುದ್ಧಿಗೆ ಗಿಡಗಳು: ಬ್ರಾಹ್ಮಿ, ಬಜೆ, ಶುಂಠಿ, ಹಿಪ್ಪಲಿ, ದ್ರಾಕ್ಷಿ, ಆಡುಸೋಗೆ, ನೆಲ್ಲಿ, ಖೈರ, ಬ್ರಹ್ಮ ದಂಡೆ, ಉತ್ತರಣೆ, ಜ್ಯೇಷ್ಠಮಧು, ಅಮೃತಬಳ್ಳಿ, ಲೋಳೆಸರ, ನೆಲಾವರಿಕೆ, ಮಾವು, ನಾಗವಲ್ಲಿ, ಗುಲಗುಂಜಿ, ಖೈರ ವೃಕ್ಷ, ಕಾಳುಮೆಣಸು, ಈರುಳ್ಳಿ, ಅರಿಶಿನ, ಕರಿಬಾಳೆ, ತಾಳಿಸಪತ್ರ, ಸೊಗದೆಬಳ್ಳಿ, ಕಬ್ಬು, ನೆಲಗುಂಬಳ, ಕರಿಬೇವು, ಹಂಸಪಾದಿ, ಕಲ್ಲಂಟೆ ಬೇರು, ಗುಳ್ಳದ ಬೇರು, ನುಗ್ಗೆ, ಸಮುದ್ರ ಫ‌ಲ, ಬೆಂಡೆಕಾಯಿ ಗಿಡ.

ಗಿಡ ನೆಟ್ಟ ಗಣ್ಯರು…: ಲೆಫ್ಟಿನೆಂಟ್‌ ಜನರಲ್‌ ಎಸ್‌.ಸಿ. ಸರದೇಶಪಾಂಡೆ, ಏರ್‌ ಕಮೋಡೊರ್‌ ಸಿ.ಎಸ್‌. ಹವಾಲ್ದಾರ, ಸಿತಾರ್‌ ಮಾಂತ್ರಿಕ ಪಂ. ಮಲ್ಲಿಕಾರ್ಜುನ ತರ್ಲಘಟ್ಟಿ, ಜಾನಪದ ವಿದ್ವಾಂಸ ಡಾ. ರಾಮಣ್ಣ ಮೂಲಗಿ, ಸಂಗೀತಾಸಕ್ತ ಬಿ.ಆರ್‌. ಮರೋಳಿ, ಅರವಿಂದ ಕುಲಕರ್ಣಿ, ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವೀರಣ್ಣ ಪತ್ತಾರ ಹಾಗೂ ಕಲಕೇರಿ ಶಾಲೆಯ ಮಕ್ಕಳು, ವಿದುಷಿ ಸಂಧ್ಯಾ ಮಧುಕರ ಕುಲಕರ್ಣಿ, ಯುವ ಕಲಾವಿದ ಗಣೇಶ ದೇಸಾಯಿ, ನಮಿತಾ ಕುಲಕರ್ಣಿ ಹಾಗೂ ಇತರರು…

ಸ್ವರವನದ ಈ ಪುಟ್ಟ ಮಾದರಿಯಲ್ಲಿ, ಸದ್ಯ ನೆಟ್ಟ 48 ಗಿಡಗಳಿಗೆ “ಕ್ವಿಕ್‌ ರೆಸ್ಪಾನ್ಸ್‌ (ಕ್ಕಿ ) ಕೋಡ್‌’ ಟ್ಯಾಗ್‌ ಮತ್ತು ಆ್ಯಪ್‌ ಅಭಿವೃದ್ಧಿ ಪಡಿಸಿ, ಲಗತ್ತಿಸಲು, ಯುವ ತಂತ್ರಜ್ಞರು ಮುಂದೆ ಬಂದಿದ್ದಾರೆ. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ಮುಂದಿನ ದಿನಗಳಲ್ಲಿ ಮರ ಸಿದ್ಧಗೊಳ್ಳುವ ಮಾಹಿತಿ, ವಾದ್ಯ ನುಡಿಸುವ ರೀತಿಗಳನ್ನು ಆಲಿಸಬಹುದು.
-ಪಂಚಾಕ್ಷರಿ ವಿರುಪಾಕ್ಷಯ್ಯ ಹಿರೇಮಠ, 9849022582

* ಹರ್ಷವರ್ಧನ ವಿ. ಶೀಲವಂತ

Advertisement

Udayavani is now on Telegram. Click here to join our channel and stay updated with the latest news.

Next