ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಮಾಜಿ ಉಪಮುಖ್ಯಮಂತ್ರಿ, ಹಾಲಿ ಬಿಜೆಪಿ ಶಾಸಕ ಆರ್.ಅಶೋಕ್ ಚುನಾವಣಾ ಪ್ರಚಾರ ಚುರುಕುಗೊಳಿಸಿದ್ದಾರೆ.
ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆಗೂಡಿ ಕ್ಷೇತ್ರದಾದ್ಯಂತ ಪಾದಯಾತ್ರೆ, ಮನೆ ಮನೆ ಪ್ರಚಾರ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮತ್ತೂಮ್ಮೆ ಶಾಸಕನಾಗಿ ಆರಿಸುವಂತೆ ಮತದಾರರ ಬಳಿ ಸೋಮವಾರ ಕೋರಿದರು.
ಕರಿಸಂದ್ರ ವಾರ್ಡ್‌ನಲ್ಲಿ ಕಾರ್ಯಕರ್ತರ ಜತೆಗೂಡಿ ಪಾದಯಾತ್ರೆ ಮೂಲಕ ಪ್ರಚಾರಕ್ಕ ಆಗಮಿಸಿದ ಅಶೋಕ್‌ಗೆ, ಮಹಿಳೆಯರು ಆರತಿ ಎತ್ತುವ ಮೂಲಕ ಗೆಲುವು ಸಾಧಿಸುವಂತೆ ಹಾರೈಸಿದರು. ಕೇಂದ್ರಸರ್ಕಾರ ಹಾಗೂ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಯೋಜನೆಗಳನ್ನು ಮತದಾರರ ಮುಂದಿಟ್ಟ ಅಶೋಕ್, ಈ ಬಾರಿಯೂ ತಮ್ಮ ಪರ ಮತಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು.
ಕರಿಸಂದ್ರ ಸುತ್ತಮುತ್ತಲ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಶೋಕ್, ಕಳೆದ ಐದು ವರ್ಷಗಳಲ್ಲಿ ರಾಜ್ಯಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜತೆಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ. ಮೂಲಭೂತ ಸೌಕರ್ಯಗಳು, ರಸ್ತೆಗಳ ಕಾಮಗಾರಿ ನಡೆಸದೆ ವಿಳಂಬ ಮಾಡಿದೆ ಎಂದು ಆರೋಪಿಸಿದರು. ಹೀಗಾಗಿ ಈ ಬಾರಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿ, ಸಾರಿಗೆ, ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಈ ಹಿಂದಿನ ಬಿಜೆಪಿ ಸರ್ಕಾರ ಬಡವರ, ಶೋಷಿತರ, ಹಿಂದುಳಿದವರ ಎಲ್ಲ ಸಮುದಾಯದವರಿಗೆ ಸಮಾನ ಆದ್ಯತೆ ನೀಡಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಮತ್ತದೆ ಅಭಿವೃದ್ಧಿ ಆಡಳಿತ ನೀಡುವ ಭರವಸೆಯೊಂದಿಗೆ ಈ ಬಾರಿ ಸರ್ಕಾರ ಬದಲಿಸಿ ಬಿಜೆಪಿ ಬೆಂಬಲಿಸಿ ಎಂದು ಕೋರಿದರು.
ಶಾಸಕನಾಗಿ ಕ್ಷೇತ್ರದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ, ಉದ್ಯಾನವನಗಳ ನಿರ್ಮಾಣ ಸೇರಿ ಸರ್ಕಾರಿ ಯೋಜನೆಗಳು ಬಡವರಿಗೆ, ಅರ್ಹರಿಗೆ ತಲುಪುವಂತೆ ಮಾಡಿದ್ದೇನೆ. ಕ್ಷೇತ್ರದ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮತ್ತೂಮ್ಮೆ ಶಾಸಕನಾಗಿ ಗೆದ್ದೇ ಗೆಲ್ಲುವು ವಿಶ್ವಾಸವಿದೆ ಎಂದರು. ಅಲ್ಲದೆ, ಶಾಸಕನಾಗಿ ಮಾಡಿದ ಹಲವು ಜನಪರ ಕಾರ್ಯಗಳೇ ತಮಗೆ ಈ ಬಾರಿಯೂ ಶ್ರೀ ರಕ್ಷೆಯಾಗಲಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.