Advertisement

ಬಿಜೆಪಿಯಿಂದ ಧರ್ಮದ ಹೆಸರಲ್ಲಿ ಮತ ಗಳಿಕೆ: ವಿಷ್ಣುನಾಥನ್‌

03:10 AM Jul 16, 2017 | Team Udayavani |

ಸುಳ್ಯ : ಬಿಜೆಪಿ ಧರ್ಮದ ಹೆಸರಿನಲ್ಲಿ ಗಲಭೆ ನಡೆಸಿ ಮತ ಗಳಿಸುತ್ತದೆ.  ಈಗಾಗಲೇ ಗೋವಿನ ಹೆಸರಿನಲ್ಲಿ ದೇಶಾದ್ಯಂತ 33 ಹತ್ಯೆಗಳಾಗಿವೆ. ಇದೇ ರೀತಿ ಕರಾವಳಿಯಲ್ಲೂ  ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಮೈಸೂರು ವಿಭಾಗದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ಟೀಕಿಸಿದ್ದಾರೆ.

Advertisement

ಲಯನ್ಸ್‌ ಸೇವಾ ಸದನದಲ್ಲಿ ಜರಗಿದ ಸುಳ್ಯ ತಾಲೂಕು ಕಾಂಗ್ರೆಸ್‌ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾಲ್ಕು ವರ್ಷಗಳಿಂದಲೂ ಸಿದ್ದರಾ ಮಯ್ಯ ಓರ್ವರೇ ಮುಖ್ಯಮಂತ್ರಿ ಯಾಗಿ ಅಧಿಕಾರ ನಡೆಸುತ್ತಿರುವುದು ದಕ್ಷ ಆಡಳಿತಕ್ಕೆ ಸಾಕ್ಷಿ. ಆದರೆ ಹಿಂದಿನ ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಜತೆಗೆ ಮುಖ್ಯಮಂತ್ರಿ ಸಹಿತ ಶಾಸಕರು ಜೈಲಿಗೆ ಹೋಗಿದ್ದರು. ಅವರಿಗೆ ಸ್ಥಿರ ಸರಕಾರ ಕೊಡಲು ಸಾಧ್ಯವಾಗಿರಲಿಲ್ಲ ಎಂದರು.

ಅಧಿಕಾರಕ್ಕೇರಿದರೆ ಕೇವಲ 40 ರೂಪಾಯಿಗೆ ಪೆಟ್ರೋಲ್‌ ನೀಡುವುದು, ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ಜಮೆಗೊಳಿಸುವ ಭರವಸೆ ನೀಡಿದ ಪ್ರಧಾನಿ, ಯಾರ ಖಾತೆಗೆ ಎಷ್ಟು ಜಮಾಯಿಸಿದ್ದಾರೆ ಎಂದು ಪ್ರಶ್ನಿಸಿದರು. 

ತಾಲೂಕಿನ ಒಕ್ಕಲಿಗ ಸಮುದಾಯದ ನಾಯಕರಿಗೆ ನೀಡಿದ ಭರವಸೆ ಯಂತೆ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಾಮರಸ್ಯ ಬೇಡವಾಗಿದೆ
ಕೆಪಿಸಿಸಿ ಮುಖಂಡ ದಿನೇಶ್‌ ಗುಂಡೂ ರಾವ್‌ ಮಾತನಾಡಿ,  ರಾಹುಲ್‌ಗಾಂಧಿಯ ತಂಡ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವ ಕಾರ್ಯಮಾಡುತ್ತಿದೆ. 

Advertisement

ಕಾಂಗ್ರೆಸ್‌ ದೀನದಲಿತರಿಗೆ ಹೇಗೆ ರಕ್ಷಣೆ ನೀಡುವು ದೆಂಬುದನ್ನು ಚಿಂತಿಸುತ್ತಿದೆ. ಜಾತ್ಯತೀತ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯ ಒತ್ತು ನೀಡುತ್ತಲೇ ಬಂದಿದೆ. ಆದರೆ ಸಂಘಪರಿವಾರ ಮತ್ತು ಬಿಜೆಪಿಗೆ ಇವುಗಳ ಮೇಲೆ ನಂಬಿಕೆಯಿಲ್ಲ ಎಂದರು.

ಉಳ್ಳಾಲದ ಕಾರ್ತಿಕ್‌ ರಾಜ್‌ ಕೊಲೆಯಾದಾಗ ಬೆಂಕಿ ಹಚ್ಚುವ ಬಗ್ಗೆ ಮಾತ ನಾಡಿದ  ಸಂಸದ  ನಳಿನ್‌, ಪ್ರಕರಣದಿಂದ ನಿಜ ಬಣ್ಣಬಯಲಾದಾಗ ಕ್ಷಮೆ ಕೋರಲಿಲ್ಲ ಏಕೆ ಎಂದು ಪ್ರಶ್ನಿಸಿದರಲ್ಲದೇ, ಕಾಂಗ್ರೆಸಿಗರು ಯಾವುದೇ ಸಮುದಾಯದ ಸೂತಕದ ಮನೆಗೆ ತೆರಳುತ್ತಾರೆ. ಆದರೆ ಬಿಜೆಪಿಯವರು ಮಾತ್ರ ಯಾಕೆ ಮುಸ್ಲಿಂ ಸಮುದಾಯದವರ ಮನೆಗೆ ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರನ್ನುದ್ದೇಶಿಸಿ ಮಾತನಾಡಿದರು.

ಜಾತ್ಯತೀತ ನಿಲುವು ದುರ್ಬಲ
ದುರ್ಬಲ ಜಾತ್ಯತೀತ ನಿಲುವಿನ ಪಕ್ಷಗಳಿಂದ ಪ್ರಜಾಪ್ರಭುತ್ವದ ಜಾತ್ಯತೀತ ನಿಲುವು ದುರ್ಬಲಗೊಳ್ಳುತ್ತದೆ. ಕಾಂಗ್ರೆಸ್‌ ಯಾವುದೇ ಮತೀಯವಾದವನ್ನು ವಿರೋಧಿ ಸುತ್ತದೆ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಿದ್ದರಾಮಯ್ಯ ಸರಕಾರ ಬಂದ ಬಳಿಕ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಡಿ.ವಿ. ಸದಾನಂದ ಗೌಡ ಅವರು ಇದೇ ಊರಿನವರಾಗಿದ್ದರೂ ಅವರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ  ಕೈಗೊಂಡಿಲ್ಲ  ಎಂದರು.

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಎಂ.ಎಸ್‌. ಮಹಮ್ಮದ್‌, ಪಿ.ಪಿ. ವರ್ಗೀಸ್‌, ಜಿಲ್ಲಾ ಮುಖಂಡರಾದ ದಿವ್ಯಪ್ರಭಾ ಚಿಲ್ತಡ್ಕ, ಕಿರಣ್‌ ಬುಡ್ಲೆಗುತ್ತು,  ಮುತ್ತಪ್ಪ ಪೂಜಾರಿ, ಶೇಖರ್‌ ಆಲಿ ಕುಕ್ಕೇಡಿ, ಸತ್ಯನ್‌ ಪುತ್ತೂರು, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ, ಸುಳ್ಯದ ನಾಯಕರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಕುಂಞಪಳ್ಳಿ, ಡಾ| ರಘು, ಟಿ.ಎಂ. ಶಹೀದ್‌, ಚಂದ್ರಲಿಂಗಂ, ಅಚ್ಯುತ ಮಲ್ಕಜೆ, ಸಿದ್ದಿಕ್‌ ಕೊಕ್ಕೊ, ಮಜಿದ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಚಾರ್‌, ಇಸಾಕ್‌ ಸಾಹೇಬ್‌, ಪಿ.ಎ.ಮಹಮ್ಮದ್‌, ಸುಧೀರ್‌ ರೈ ಮೇನಾಲ, ಎಸ್‌. ಸಂಶುದ್ದೀನ್‌, ಪುರುಷೋತ್ತಮ, ಟಿ.ಎಂ. ಶಹೀದ್‌, ನವೀನ್‌ ಡಿ’ಸೋಜಾ ಮತ್ತಿತರಿದ್ದರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಪ್ರಕಾಶ್‌ ರೈ ಸ್ವಾಗತಿಸಿದರು. ಸಚಿನ್‌ರಾಜ್‌ ಶೆಟ್ಟಿ , ಮುಸ್ತಫಾ ನಿರೂಪಿಸಿದರು. ಎಸ್‌ಡಿಪಿಐನ ಹನೀಫ್ ಬೀಜದಕೊಚ್ಚಿ ಮತ್ತು ಬಶೀರ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next