Advertisement

ಗಾಳಿಪಟ ಸ್ಪರ್ಧೆ ಮೂಲಕ ಮತದಾನ ಜಾಗೃತಿ

05:01 PM May 07, 2018 | Team Udayavani |

ದಾವಣಗೆರೆ: ಮತದಾನ ಮಹತ್ವದ ಸಂದೇಶ ಸಾರುವ ಕರಪತ್ರ ವಿತರಣೆ, ಭಿತ್ತಿಪತ್ರ ಪ್ರದರ್ಶನ, ಚಿತ್ರಕಲೆ, ಗೀಗೀ
ಪದ ಗಾಯನ, ಕ್ಯಾಂಡೆಲ್‌ ಲೈಟ್‌ ಅಭಿಯಾನದ ನಂತರ ಭಾನುವಾರ ಗಾಳಿಪಟ ಹಾರಿಸುವ ಸ್ಪರ್ಧೆಯ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

Advertisement

ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನೆರೆದಿದ್ದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಸ್ವೀಪ್‌ ಸಮಿತಿ ಜಿಲ್ಲಾ ಅಧ್ಯಕ್ಷೆ ಎಸ್‌. ಅಶ್ವತಿ, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ತಾಲೂಕು ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಲ್‌.ಎಸ್‌.ಪ್ರಭುದೇವ್‌, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರು ಅಂತಾರಾಷ್ಟ್ರೀಯ ಖ್ಯಾತಿಯ ವಿ. ಕೃಷ್ಣಾಜಿರಾವ್‌ ಮತ್ತಿತರ ತಂಡದ ಸಿದ್ಧಪಡಿಸಿದ್ದ ಬಣ್ಣ ಬಣ್ಣದ, ವಿವಿಧ ಚಿತ್ತಾರ, ಶೈಲಿಯ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಎಲ್ಲೆಡೆ ರಾರಾಜಿಸಿದ ಐ ವೋಟ್‌… ಎಂಬ ಪದ. ತಪ್ಪದೇ ಮತದಾನ ಮಾಡುವ ಮತ್ತು ಮಾಡಬೇಕು ಎಂಬ ಸಂದೇಶ ಸಾರಿತು. ಸ್ವತಃ ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು
ಹೇಳಿದರು. 

ಜಿಲ್ಲಾಡಳಿತ ಹಾಗೂ ಸ್ವೀಪ್‌ ಸಮಿತಿಯಿಂದ ಗ್ರಾಪಂ, ತಾಲೂಕು ಮಟ್ಟ, ಶಾಲೆ ಕಾಲೇಜು ಮುಂತಾದಡೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಂದ, ಅದರಲ್ಲಿಯೂ ಯುವ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮತ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
 
ಸ್ವೀಪ್‌ ಸಮಿತಿ ಅಧ್ಯಕ್ಷೆ ಎಸ್‌. ಅಶ್ವತಿ ಮಾತನಾಡಿ, ಸ್ವೀಪ್‌ ಸಮಿತಿಯಿಂದ ನೂರಾರು ಕಾರ್ಯಕ್ರಮ ಮಾಡಲಾಗಿದೆ.
ಸಾರ್ವಜನಿಕರು, ಮಹಿಳೆಯರು, ಯುವ ಮತದಾರರು ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹಿಂದಿನ ಬಾರಿಗಿಂತ ಮತಗಳ ಪ್ರಮಾಣ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬರು ನೆರೆಹೊರೆಯವರಿಗೆ ಮತದಾನದ ಮಹತ್ವ ಸಾರಿ ಹೇಳಿ ಮತದಾನ ಮಾಡಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next