ಬಳ್ಳಾರಿ: ನೈತಿಕ ಮತದಾನದ ಮಹತ್ವ ತಿಳಿಸುವ ಮತ್ತು ಕಡ್ಡಾಯ ಮತದಾನಕ್ಕೆ ಉತ್ತೇಜಿಸುವ ಹಾಗೂ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಸಲುವಾಗಿ ವೃತ್ತಿನಿರತ ಮಹಿಳೆಯರಿಂದ ನಗರದಲ್ಲಿ ಶನಿವಾರ ಸಂಜೆ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾಥಾಕ್ಕೆ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಧಿಕಾರಿ ರಾಮ್ ಪ್ರಸಾತ್ ಮನೋಹರ್ ಚಾಲನೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ, ಜಿಲ್ಲಾ ಸ್ವೀಪ್ ಐಕಾನ್ ಆಗಿರುವ ದಿವ್ಯಾಂಗಿನಿ ಲಕ್ಷ್ಮೀದೇವಿ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ನೈತಿಕ ಮತದಾನದ ಕುರಿತು ಅರಿವು ಮೂಡಿಸಿದರು.
ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಜಾಥಾವು ಇಂದಿರಾಗಾಂಧಿ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೊಲೀಸ್‌ಠಾಣೆ, ತೇರು ಬೀದಿ, ಜೈನ್ ಮಾರ್ಕೆಟ್, ಎಚ್.ಆರ್. ಗವಿಯಪ್ಪ ವೃತ್ತದವರೆಗೆ ತೆರಳಿತು.
ಈ ಜಾಥಾದಲ್ಲಿ ಮಹಿಳೆಯರ ಡೊಳ್ಳು ಕುಣಿತ, ಮಹಿಳೆಯರಿಂದ ಅವೆಂಜರ್ 220ಸಿಸಿ ಬೈಕ್ ರೈಡಿಂಗ್, ಮಹಿಳೆಯರೇ ಸ್ವತಃ ಎತ್ತಿನಗಾಡಿ ಚಲಾಯಿಸಿರುವುದು ಗಮನ ಸೆಳೆಯಿತು. ಮಹಿಳಾ ಪೊಲೀಸ್ ಪೇದೆಗಳು, ಮಹಿಳಾ ವಕೀಲರು, ಮಹಿಳಾ ಶುಶ್ರೂಷಕಿಯರು, ಮಹಿಳಾ ವೈದ್ಯರು, ಗೃಹರಕ್ಷಕ ದಳದ ಮಹಿಳೆಯರು, ಎನ್‌ಸಿಸಿ ಮಹಿಳಾ ಕೆಡೆಟ್‌ಗಳು, ಮಹಿಳಾ ಕ್ರೀಡಾಪಟುಗಳು, ಆಶಾ ಕಾರ್ಯಕರ್ತೆಯರು, ಮಹಿಳಾ ಪೌರಕಾರ್ಮಿಕರು ಸಮವಸ್ತ್ರ ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಝಾನ್ಸಿ ರಾಣಿ ಲಕ್ಷ್ಮಿಭಾಯಿ, ಓನಕೆ ಒಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಮೀರಾಕುಮಾರಿ ಸೇರಿದಂತೆ ರಾಷ್ಟ್ರಮಟ್ಟದ ಮಹಿಳಾ ಸಾಧಕರ ವೇಷಭೂಷಣ ಧರಿಸಿ ಜಾಥಾದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಲಂಬಾಣಿ, ಮಾರ್ವಾಡಿ, ಕೊಡಗು, ಮುಸ್ಲಿಂ, ಕ್ರಿಶ್ಚಿಯನ್, ಪಂಜಾಬಿ, ಇಳಕಲ್ ಸೀರೆ, ಮಹಾರಾಷ್ಟ್ರ ವಸ್ತ್ರಧಾರಣೆ ಸೇರಿದಂತೆ ವಿವಿಧ ರೀತಿಯ ಸಾಂಪ್ರಾದಾಯಿಕ ಉಡುಪುಗಳನ್ನು ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜಿಲ್ಲಾ ಚುನಾವಣಾ ಕಾರಿ ಡಾ| ವಿ.ರಾಮ್ ಪ್ರಸಾತ್ ಮನೋಹರ್ ಮತ್ತು ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು. ತಾವು ನೈತಿಕವಾಗಿ ತಮ್ಮ ಹಕ್ಕು ಚಲಾಯಿಸುವುದರ ಜತೆಗೆ ಸುತ್ತಮುತ್ತಲಿನವರಿಗೂ ಮತಚಲಾಯಿಸುವಂತೆ ಸಲಹೆ ನೀಡಬೇಕು ಎಂದರು.