Advertisement

ಮತಜಾಗೃತಿ: ಮನೆ-ಮನೆಗೆ ವಿಶಿಷ್ಟ ಕರಪತ್ರ ಹಂಚಿಕೆ

06:00 AM Apr 14, 2018 | |

ಕುಂದಾಪುರ: ಮತದಾನದ ಜಾಗೃತಿಗಾಗಿ ಮೂರು ಹಂತದಲ್ಲಿ ಕರಪತ್ರ ಹಂಚುವ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್‌ ಸಮಿತಿ ಹಮ್ಮಿಕೊಂಡಿದ್ದು, ಅದಕ್ಕಾಗಿ ವಿಶಿಷ್ಟ ಕರಪತ್ರವನ್ನು ಸಿದ್ಧಪಡಿಸಿದೆ. ಈ ಕರಪತ್ರದಲ್ಲಿ ಕೋಟೇಶ್ವರದ ವಿದ್ಯಾರ್ಥಿ ಚಿತ್ರಿಸಿದ ಮತಜಾಗೃತಿಯ ಕುರಿತ ಚಿತ್ರವನ್ನು ಮುದ್ರಿಸಲಾಗಿರುವುದು ವಿಶೇಷ. 

Advertisement

ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನ ಆಗಿರುವ ಏಳು ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಸ್ವೀಪ್‌ ಸಮಿತಿಯು ಸಿದ್ಧಪಡಿಸಿರುವ ಕರಪತ್ರದಲ್ಲಿ ಪ್ರತಿಜ್ಞಾ ವಿಧಿ, ಸಹಾಯವಾಣಿಯ ದೂರವಾಣಿ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಹಿತಿ, ಮತದಾನ ಮಾಡುವ ರೀತಿಯ ಕುರಿತ ವಿವರಗಳನ್ನು ಪ್ರಕಟಿಸಲಾಗಿದೆ. ಕರಪತ್ರದ ಇನ್ನೊಂದು ಪುಟದಲ್ಲಿ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಕೇತ್‌ ಮತದಾನ ಜಾಗೃತಿ ಕುರಿತು ರಚಿಸಿದ ಚಿತ್ರವನ್ನು ಮುದ್ರಿಸಲಾಗಿದೆ.

ಈ ಚಿತ್ರದಲ್ಲಿ ಮತಗಟ್ಟೆಯಲ್ಲಿ ನಡೆಯುವ ಚಿತ್ರಣವಿದೆ. ಅದಲ್ಲದೆ ಮತದಾನದ ಜಾಗೃತಿಯ ಕುರಿತು ಮತದಾನ ತಮ್ಮ ಪವಿತ್ರ ಹಕ್ಕು ಚಲಾಯಿಸಿರಿ., ನಾವು ಮತ ಚಲಾಯಿ ಸೋಣ, ರಾಷ್ಟ್ರ ನಿರ್ಮಾಣ ಮಾಡೋಣ ಎಂಬಿತ್ಯಾದಿ ಅನೇಕ ಘೋಷಣೆಗಳು ಈ ಚಿತ್ರದಲ್ಲಿವೆ. 

3 ಹಂತಗಳಲ್ಲಿ ಹಂಚಿಕೆ
ಮೊದಲ ಹಂತದಲ್ಲಿ ಮನೆ – ಮನೆಗೆ ಹೋಗುವ ದಿನಪತ್ರಿಕೆಯ ಮೂಲಕ ಈ ಕರಪತ್ರಗಳನ್ನು ವಿತರಿಸಲಾಗುತ್ತದೆ. 2ನೇ ಹಂತದಲ್ಲಿ ಕಡಿಮೆ ಮತದಾನ ನಡೆದಿರುವ ಮತಗಟ್ಟೆ ವ್ಯಾಪ್ತಿಯ ಗ್ರಾ.ಪಂ.ಗಳ ಪಿಡಿಒಗಳಿಗೆ ಈ ಕರಪತ್ರವನ್ನು ಕಳುಹಿಸಿ ಅಲ್ಲಿಂದ ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ – ಮನೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ ಶಿರೂರು ಮತ್ತು ಬೈಂದೂರು ಮತಗಟ್ಟೆಗಳಿಗೆ ಬೇಕಾದ ಸುಮಾರು 2000 ಕರಪತ್ರಗಳನ್ನು ಕಳುಹಿಸಿಕೊಡಲಾಗಿದೆ. 

ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ  ಮತದಾನ ಜಾಗೃತಿಯ ಈ ಫೋಸ್ಟ್‌ ಕಾರ್ಡ್‌ ಆಮಂತ್ರಣ ಪತ್ರಿಕೆಗಳನ್ನು ಅಂಚೆ ಇಲಾಖೆಯ ಮೂಲಕ ಮನೆಮನೆಗಳಿಗೆ ತಲುಪಿಸಲು ಜಿಲ್ಲಾಡಳಿತವು ಈ ಮೊದಲು ಯೋಜನೆ ಹಾಕಿಕೊಂಡಿತ್ತು. 

Advertisement

ಆದರೆ ಫೋಸ್ಟ್‌ಮೆನ್‌ಗಳು ಪತ್ರಗಳಿರುವ ಮನೆಗಳಿಗೆ ಮಾತ್ರ ತೆರಳುವುದರಿಂದ ಈ ಆಮಂತ್ರಣ ಪತ್ರಿಕೆ ಎಲ್ಲ ಮನೆಗಳಿಗೂ ತಲುಪಲು ಸಾಧ್ಯವಿರುವುದಿಲ್ಲ. ಅದಲ್ಲದೆ ಜಿಲ್ಲಾಡಳಿತ ನಿಗದಿಪಡಿಸಿದ ಸಮಯದೊಳಗೆ ಈ ಕಾರ್ಡ್‌  ತಲುವುವ ಸಾಧ್ಯತೆ ಕೂಡ ಕಡಿಮೆ. 

ಮನೆಗೆ ಪೋಸ್ಟ್‌ಕಾರ್ಡ್‌
ಇದನ್ನು ಅರಿತ ಜಿಲ್ಲಾಡಳಿತ ಆಯಾ ಮತಗಟ್ಟೆ ವ್ಯಾಪ್ತಿಯ ಸರಕಾರಿ ಅಧಿಕಾರಿಗಳ ಮೂಲಕ ಮನೆ – ಮನೆಗಳಿಗೆ ಫೋಸ್ಟ್‌ ಕಾರ್ಡ್‌ಗಳನ್ನು ಮುಟ್ಟಿಸಿ ಮತದಾನ ಮಾಡಲು ಮತಗಟ್ಟೆಗೆ ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಈಗ ನಡೆಯುತ್ತಿವೆ.

ಕಳೆದ ಚುನಾವಣೆ: ಕನಿಷ್ಠ  ಮತದಾನವಾದ 7 ಮತಗಟ್ಟೆಗಳು
ಬೈಂದೂರು -243, ಕುಂದಾಪುರ -215, ಉಡುಪಿ- 213, ಕಾಪು 203 ಹಾಗೂ ಕಾರ್ಕಳ -204 ಒಟ್ಟು ಉಡುಪಿ ಜಿಲ್ಲೆಯಲ್ಲಿ 1,078 ಮತಗಟ್ಟೆಗಳಿದ್ದು, ಇದರಲ್ಲಿ 2013 ರ ವಿಧಾನಸಭಾ ಚುನಾವಣೆಯಲ್ಲಿ ಶೇ. 60 ಕ್ಕಿಂತ ಕಡಿಮೆ ಮತದಾನ ಆಗಿರುವ ಒಟ್ಟು 7 ಮತಗಟ್ಟೆಗಳನ್ನು ಗುರುತಿಸಲಾಗಿದೆ.
 
ಕಾಪು ವಿಧಾನಸಭಾ ಕ್ಷೇತ್ರದ ಏಣಗುಡ್ಡೆ ಅಗ್ರಹಾರ ಶ್ರೀದುರ್ಗಾ ಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ- ಶೇ. 41.84, ಕಾಪು ಸರಕಾರಿ ಮಾದರಿ ಹಿರಿಯ ಪ್ರಾ. ಶಾಲೆ- ಶೇ. 42.99, ಉಡುಪಿ ವಿಧಾನಸಭಾ ಕ್ಷೇತ್ರದ ಮಣಿಪಾಲ ಜೂನಿಯರ್‌ ಕಾಲೇಜು – 54.16, ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ಹಿಂದೂಸ್ತಾನಿ ಹಿ.ಪ್ರಾ. ಶಾಲೆ- 54.28, ಶಿರೂರು ಸ.ಮಾ.ಹಿ.ಪ್ರಾ. ಶಾಲೆ- ಶೇ.55.10, ಶಿರೂರು ಹಿಂದೂಸ್ತಾನಿ ಹಿ.ಪ್ರಾ. ಶಾಲೆ- ಶೇ.57.69, ಶಿರೂರು ಮೇಲ್ಪಂಕ್ತಿ ಹಿ.ಪ್ರಾ. ಶಾಲೆ- ಶೇ. 60 ಮತದಾನವಾಗಿದೆ. 

ಅಂಚೆ ಕಾರ್ಡ್‌ನಲ್ಲಿ ಆಮಂತ್ರಣ
ಕಳೆದ ಬಾರಿ ಕಡಿಮೆ ಮತದಾನ ನಡೆದ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂಚೆ ಕಾರ್ಡ್‌ನಲ್ಲಿ ವಿಶೇಷ ಆಮಂತ್ರಣಪತ್ರ ಸಿದ್ಧ ಪಡಿಸಲಾಗಿದೆ. ಇದನ್ನು ಆ ಮತಗಟ್ಟೆ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಸಂಬಂಧ‌ಪಟ್ಟ ಪಂಚಾಯತ್‌ಗಳ ಮೂಲಕ ತಲುಪಿಸಲಾಗುವುದು. 4 ಸಾವಿರಕ್ಕೂ ಹೆಚ್ಚು ಕೊರಗರು ಹಾಗೂ ಬುಡಕಟ್ಟು ಸಮುದಾಯದವರಿಗೂ ಅರಿವು ಮೂಡಿಸಲು ಸಿದ್ಧತೆಗಳು ನಡೆದಿವೆ. ಇದರೊಂದಿಗೆ ಮತದಾನದ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುವುದು. 
– ಶಿವಾನಂದ ಕಾಪಶಿ, 
ಜಿಲ್ಲಾ  ಸ್ವೀಪ್‌ ಸಮಿತಿ ಅಧ್ಯಕ್ಷರು (ಉಡುಪಿ ಸಿಇಒ)

 – ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next