ಕೆ.ಆರ್.ನಗರ: ಪ್ರತಿಯೊಬ್ಬ ಮತದಾರರೂ ಮುಕ್ತ ಹಾಗೂ ನಿರ್ಭೀತಿಯಿಂದ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಮೋಹನ್ ಮನವಿ ಮಾಡಿದರು.
ತಾಲೂಕಿನ ಕಪ್ಪಡಿ ಜಾತ್ರೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ತಾಲೂಕು ಪಂಚಾಯ್ತಿ ಹಾಗೂ ಹೆಬ್ಟಾಳು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ನಡೆದ ಕಡ್ಡಾಯ ಮತದಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಮತದಾರರು ಮತದಾನದ ಮಹತ್ವದ ಬಗ್ಗೆ ಇತರರಿಗೆ ತಿಳಿಸಬೇಕು ಎಂದರು.
ಹಣ ಹಾಗೂ ಆಮಿಷಗಳಿಗೆ ಒಳಗಾಗದೆ ಅರ್ಹರು ಮತ್ತು ಉತ್ತಮ ಕೆಲಸ ಮಾಡುವವರನ್ನು ಆಯ್ಕೆ ಮಾಡಿದರೆ ಸುಭದ್ರ ದೇಶ ನಿರ್ಮಾಣ ಸಾಧ್ಯವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಮತದಾರರು ಹೆಚ್ಚು ಮತ ಚಲಾಯಿಸಬೇಕು ಎಂದು ಕೋರಿದರು.
ಮಾ.6ರಿಂದ ತಾಲೂಕಿನಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಜಾಥಾ, ಸಭೆ ಮತ್ತು ಮತದಾನದ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಆರಂಭಿಸಿದ್ದು, ಇದು ಲೋಕಸಭಾ ಚುನಾವಣೆಯವರೆಗೆ ಮುಂದುವರಿಯಲಿದೆ ಎಂದರು. ಕಪ್ಪಡಿ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯಲ್ಲಿ ಒಂದು ತಿಂಗಳ ಕಾಲ ಮತದಾನದ ಅರಿವು ಮೂಡಿಸುವ ಕಾರ್ಯವನ್ನು ನಡೆಸಲಿದ್ದು, ನಮ್ಮೊಂದಿಗೆ ಮತದಾರರು ಕೈಜೋಡಿಸಬೇಕು ಎಂದು ಕೋರಿದರು.
ಈ ವೇಳೆ ಜಲಸಂಪನ್ಮೂಲ ಇಲಾಖೆ ಸಹಾಯಕ ಅಭಿಯಂತರ ಎಸ್.ಪ್ರಕಾಶ್, ಎಂಎನ್‌ಆರ್‌ಇಜಿ ಯೋಜನೆಯ ತಾಲೂಕು ನಿರ್ದೇಶಕ ಗಿರೀಶ್, ತಾ.ಪಂ. ವ್ಯವಸ್ಥಾಪಕಿ ಅನಿತಾ, ಹೆಬ್ಟಾಳು ಗ್ರಾಪಂ ಪಿಡಿಒ ರಾಜಕುಮಾರ್, ಕಾರ್ಯದರ್ಶಿ ಶಿವಯ್ಯ ಇತರರಿದ್ದರು.