Advertisement

ಮತದಾರನ ಭಾವಚಿತ್ರ, ವಿಳಾಸ ತಿದ್ದುಪಡಿಗೆ ಅವಕಾಶ

09:26 PM Sep 07, 2019 | Lakshmi GovindaRaju |

ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಮತದಾರನ ಹಳೆ ಭಾವಚಿತ್ರ ಬದಲಾಗಿ ಇತ್ತೀಚಿನ ಭಾವಚಿತ್ರ ಸೇರ್ಪಡೆಗೆ ಹಾಗೂ ವಿಳಾಸ ಮತ್ತು ಸ್ಥಳಾಂತರಕ್ಕೆ ಮುಕ್ತ ಅವಕಾಶ ಇದ್ದು, ಜಿಲ್ಲೆಯ ಮತದಾರರು ಇದರ ಸದ್ಬಳಕೆ ಪಡೆದುಕೊಳ್ಳಬೇಕೆಂದು ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ನಗರಸಭೆ ಸಹಯೋಗದೊಂದಿಗೆ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಅಕ್ಟೋಬರ್‌ 15 ರ ವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ ಎಂದರು.

ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ: 18 ವರ್ಷ ಮೇಲ್ಪಟ್ಟ ಯುವಕ ಹಾಗೂ ಯುವತಿಯರನ್ನು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಇದ್ದು, ಇದರ ಜೊತೆಗೆ ಮರಣ ಹೊಂದಿದವರನ್ನು ಪಟ್ಟಿಯಿಂದ ತೆಗೆದು ಹಾಕುವುದು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಭಾವಚಿತ್ರ, ವಯಸ್ಸು ಮತ್ತಿತರ ಹಲವಾರು ತಪ್ಪುಗಳನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು.

ಎರಡು ಕಡೆ ಇದ್ದರೆ ಕ್ರಮ ವಹಿಸಿ: ಯಾವುದೇ ಸ್ಥಳ, ಪ್ರದೇಶದಲ್ಲಿ ಒಬ್ಬ ವ್ಯಕ್ತಿಯು 2 ಕಡೆ ಗುರುತಿನ ಚೀಟಿಯನ್ನು ಹೊಂದಿದ್ದರೆ ಅಂತಹವರ ವಿರುದ್ಧ ಸರ್ಕಾರದ ಆದೇಶದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತಗಟ್ಟೆ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ನಿರ್ದೇಶನ ನೀಡಿದರು.

ಸಹಾಯವಾಣಿ ಸಂಪರ್ಕಿಸಿ: ಮತದಾರರ ಪಟ್ಟಿಯನ್ನು ಸಾಮಾನ್ಯ ಸೇವಾ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಮತದಾರರ ನೋಂದಣಿ ಕಚೇರಿ, ಗ್ರಾಪಂಗಳ ಬಾಪೂಜಿ ಕೇಂದ್ರದಲ್ಲಿ ಸಾರ್ವಜನಿಕರು ದಾಖಲೆ ಸಲ್ಲಿಸಿ ಪರಿಷ್ಕರಣೆ ಮಾಡಿಸಬಹುದು. ಗೊಂದಲಗಳು ಇದ್ದಲ್ಲಿ 1950 ಸಹಾಯವಾಣಿ ಕೇಂದ್ರವನ್ನು ವಿಕಲಚೇತನರು ಸೇರಿದಂತೆ ಇತರರು ಮತದಾರರ ಪಟ್ಟಿಯಲ್ಲಿರುವ ತಮ್ಮ ವಿವರಗಳ ಸೇರ್ಪಡೆ, ತಿದ್ದುಪಡಿ ಮಾಡಿಸಲು ಮಾಹಿತಿ ಪಡೆಯಬಹುದು ಎಂದರು. ಕಾರ್ಯಗಾರದಲ್ಲಿ ಚಿಕ್ಕಬಳ್ಳಾಪುರ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಉಮಾಕಾಂತ್‌ ಸೇರಿದಂತೆ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

ಮತಗಟ್ಟೆ ಅಧಿಕಾರಿಗಳಿಗೆ ಏನೆಲ್ಲಾ ತರಬೇತಿ: ಕಾರ್ಯಾಗಾರದಲ್ಲಿ ಮತದಾರರ ಪಟ್ಟಿ ಪರಿಶೀಲನೆ, ನೂತನ ಸೇರ್ಪಡೆ, ತಿದ್ದಪಡಿ, ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ, ಯಾವ ದಾಖಲಾತಿಗಳನ್ನು ಪಡೆಯಬೇಕು, ಮೊಬೈಲ್‌ ಆ್ಯಪ್‌ಗ್ಳ ಮೂಲಕ ಯಾವ ರೀತಿ ಮತದಾರರ ಪಟ್ಟಿ ಪರಿಷ್ಕಣೆ ಮಾಡಬೇಕು ಎಂಬುದರ ಬಗ್ಗೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸಿ.ಎನ್‌. ಶಂಕರರೆಡ್ಡಿ ನೀಡಿದರು. ಸುಮಾರು 150 ಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮತದಾರರ ಪಟ್ಟಿಯಿಂದ ಅರ್ಹರು ಹೊರಗೆ ಉಳಿಯಬಾರದು. 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಅಗತ್ಯ ದಾಖಲೆ ಪಡೆದು ಸೇರ್ಪಡೆ ಮಾಡಿಕೊಳ್ಳಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕು. ಯಶಸ್ವಿಗೊಳ್ಳಬೇಕಾದರೆ ಮತದಾರರು ಪಾತ್ರ ಅಮೂಲ್ಯ. ಅರ್ಹರನ್ನು ಪಟ್ಟಿಗೆ ಸೇರಿಸಬೇಕು.
-ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next