ಕಲಬುರಗಿ: ಜಾತಿ, ಧರ್ಮದ ಹೆಸರಿನಲ್ಲಿ ಮತ್ತೂಂದು ದಾಳಿಯ ಹೆಸರಿನಲ್ಲಿ ಒಡೆದು ಹಾಕುತ್ತಿದ್ದಾರಲ್ಲ ಬಿಜೆಪಿಯವರು ಅವರಿಗ್ಯಾಕೆ ಜನ ಮತ ಹಾಕ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದರು. ಆಳಂದ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಶಾಸಕ ಬಿ.ಆರ್.ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 110 ಕೋಟಿ ರೂ.ಗಳ 26 ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಹಸಿದಾಗ ಅನ್ನ ಕೊಟ್ಟವರನ್ನು ಮರೆಯುವಷ್ಟು ಕಲ್ಲೆದೆಯ ಜನರು ನಮ್ಮವರಲ್ಲ. ಅವರಿಗೆ ಯಾರು ಏನು ಕೊಟ್ಟಿದ್ದಾರೆ ಎಲ್ಲವೂ ಗೊತ್ತಿದೆ. ಈ ರಾಜ್ಯದಲ್ಲಿ ಮೋದಿ, ಶಾ ಆಟ ನಡೆಯುವುದಿಲ್ಲ. ರಾಜ್ಯದಲ್ಲಿ ಭ್ರಷ್ಟ ಸರಕಾರ ಅಂತ ಹೇಳ್ತಾರಲ್ಲಾ. ಅಮಿತ್ ಶಾ..ಭ್ರಷ್ಟರನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ನಮಗೆ ಉಪದೇಶ ಮಾಡ್ತಿರಾ? ನಾವ್ಯಾರು ಜೈಲಿಗೆ ಹೋಗಿ ಬಂದಿಲ್ಲ ಅಲ್ಲಿ ಇಲ್ಲಿ ಹೋಗಿ ಅಧಿಕಾರ ಕಳಕೊಂಡಿಲ್ಲ. ಮೊದಲು ಅವರನ್ನೆಲ್ಲಾ ಪಕ್ಕಕ್ಕೆ ಸರಿಸಿ ಮಾತನಾಡಿ ಎಂದರು. ಕರ್ನಾಟಕದಲ್ಲಿ ಇಟೆಂಡರಿಂಗ್ ಮೂಲಕ ರೈತರ ಉತ್ಪನ್ನಗಳಿಗೆಮಾರುಕಟ್ಟೆ ಒದಗಿಸಿ ಕೊಡಲಾಗಿದೆ. ಇದು ದೇಶಾದ್ಯಂತ ಇತರೆ ರಾಜ್ಯಗಳು ಅನುಸರಿಸುತ್ತಿವೆ. ನೀತಿ ಆಯೋಗವೇ ಹೇಳಿದೆ. ಇ ಟೆಂಡರಿಂಗ್ ಮತ್ತು ತೂಕದಿಂದಾಗಿ ಶೇ. 38ರಷ್ಟು ಮಾರುಕಟ್ಟೆ ವಿಸ್ತಾರಗೊಂಡು ರೈತರಿಗೆ ಅನುಕೂಲವಾಗಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ನಾವು 60ಸಾವಿರ ಕೋಟಿ ರೂ. ಖರ್ಚು ಮಾಡಿ ನೀರಾವರಿ ಯೋಜನೆ ಜಾರಿಗೆ ತರುತ್ತಿದ್ದೇವೆ. ಕೃಷಿ ಭಾಗ್ಯದ ಮೂಲಕ ರೈತರಿಗೆ ಅನುವು ಮಾಡಿಕೊಟ್ಟಿದ್ದೇವೆ. ಹಾಲಿನ ಪ್ರೋತ್ಸಾಹಧನವಾಗಿ ಒಂದು ವರ್ಷಕ್ಕೆ 1206 ಕೋಟಿ ರೂ. ಸಬ್ಸಿಡಿ ನೀಡುತ್ತಿದ್ದೇವೆ. 60 ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಿದ್ದೇವೆ. ಉಚಿತ ವಿದ್ಯುತ್ ಕೊಡಲು 9ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ನಾವು 22,27,500 ರೈತರ 8165 ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಇದೇ ಮೋದಿ ಯಾಕೆ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಅವರಿಗೆ ಉದ್ಯಮಿಗಳ, ಬಂಡಳವಾಳ ಶಾಹಿಗಳ ಬಗ್ಗೆ ಇರುವಷ್ಟು ಕಾಳಜಿ ರೈತರ ಪರವಾಗಿಲ್ಲ ಎಂದರು. ಶಾಸಕರು ಕೂಡ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಇದರಿಂದ ಜನರೇ ನಿಮ್ಮನ್ನು ಕಾಪಾಡುತ್ತಾರೆ. ಜನರೇ ಶಾಸಕರಾಗಿ ಆಯ್ಕೆ ಮಾಡುವವರು. ಅವರಿಗಾಗಿ ಉತ್ತಮ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಸಚಿವ ಡಾ| ಶರಣ ಪ್ರಕಾಶ ಪಾಟೀಲ, ಶಾಸಕ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಶಾಸಕರಾದ ಜಿ.ರಾಮಕೃಷ್ಣ, ಅಕ್ಕಲಕೋಟೆ ಶಾಸಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಭಾಗವಾನ್, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ, ಪ್ರಾದೇಶಿಕ ಆಯುಕ್ತ ಹರ್ಷಾ ಗುಪ್ತಾ, ಎಸ್ಪಿ ಎನ್. ಶಶಿಕುಮಾರ, ಜಿಪಂ ಸಿಇಓ ಹೆಪ್ಸಿಬಾರಾಣಿ ಕೋರ್ಲಪಾಟಿ ಇದ್ದರು. ಜಿಲ್ಲಾಧಿಕಾರಿ ವೆಂಕಟೇಶಕುಮಾರ ಸ್ವಾಗತಿಸಿದರು. ರಮೇಶ ಮಾಡ್ಯಾಳ ವಂದಿಸಿದರು.
ಆಳಂದ ಕಾಂಗ್ರೆಸ್ ಅಭ್ಯರ್ಥಿ ಪಾಟೀಲ: ಹೌದು ಬಿ.ಆರ್.ಪಾಟೀಲ ನನ್ನ ಬಹುಕಾಲದ ಗೆಳೆಯ. ಜೆಪಿ ಹಾಗೂ ಸಮಾಜವಾದಿ ಹಿನ್ನಲೆಯಿಂದ ಬಂದವರು. 1983ರಲ್ಲೇ ಇಬ್ಬರು ಚುನಾವಣೆ ಸ್ಪರ್ಧಿಸಿ ಗೆದ್ದೆವು. ಮುಂದೆ ಬಿಆರ್. ಹಲವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಹಿಂದೆ ಉಳಿದರು.. ನಾನು ಸಮಯಕ್ಕೆ ತಕ್ಕಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಮುಖ್ಯಮಂತ್ರಿಯಾಗಿ
ನಿಮ್ಮ ಮುಂದೆ ನಿಂತಿದ್ದೇನೆ. ಬಿ.ಆರ್. ಸರಿಯಾಗಿ ನಿರ್ಣಯ ಕೈಗೊಂಡಿದ್ದರೆ ಅವರು ಇವತ್ತು ಮಂತ್ರಿಯಾಗಿರುತ್ತಿದ್ದರು. ಇನ್ನೂ ಅವರಿಗೆ ಅವಕಾಶವಿದೆ. ನನಗಿಂತ ಚಿಕ್ಕವರು.. 15 ವರ್ಷ ರಾಜಕಾರಣ ಮಾಡ್ತಾರೆ. ಮುಂದಿನ ಬಾರಿ ನಮ್ಮದೆ ಸರಕಾರ ಬರುವುದು ಖಚಿತ.. ಆಗ ಮಂತ್ರಿ ಆಗಬಹುದು. ಅದಕ್ಕಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ.. ನಿಲ್ಲುತ್ತಾರೆ. ಅವರನ್ನು ಗೆಲ್ಲಿಸಿ ಎಂದು ಪಾಟೀಲರ ಮುಖ ನೋಡಿದ ಸಿದ್ದರಾಮಯ್ಯ ಅವರು ಟಿಕೆಟ್ ಗ್ಯಾರಂಟಿ ಅಂತಾ ಖರ್ಗೆ ಅವರನ್ನು ಕೇಳಿ ಫೈನಲ್ ಮಾಡಿಕೊಳ್ಳಪ್ಪ ಎಂದು ನಗಾಡಿದರು.. ಆಗ ಖರ್ಗೆ ಅವರು ಗ್ರೀನ್ ಸಿಗ್ನಲ್ ನೀಡಿದರು .