Advertisement
ಬಿಬಿಎಂಪಿ ನಗರದಲ್ಲಿ ಮತದಾರಪಟ್ಟಿ ಪರಿಷ್ಕರಣೆ ಅಭಿಯಾನ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೆಂಟ್ರಲ್ ಮಲೇರಿಯಾ ಲ್ಯಾಬ್‌ನ 32 ಸಿಬ್ಬಂದಿ ಪೈಕಿ 28 ಮಂದಿಯನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಲ್ಯಾಬ್‌ನ ಭಾಗಶಃ ಪರೀಕ್ಷೆಗಳು ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.
Related Articles
Advertisement
ಒಂದು ತಿಂಗಳು ತಡ: ಬಿಬಿಎಂಪಿ ಮತದಾರರ ಪರಿಷ್ಕರಣೆ ಅಭಿಯಾನವು ಅ. 15ರ ವರೆಗೂ ನಡೆಯಲಿದ್ದು, ಅಲ್ಲಿಯ ತನಕ ಲ್ಯಾಬ್‌ನ ತಂತ್ರಜ್ಞರು ಚುನಾವಣಾ ಕಾರ್ಯ ನಿರ್ವಹಿಸಬೇಕು. ಮರಳಿ ಲ್ಯಾಬ್‌ಗ ಬರುವುದರೊಳಗೆ ಕನಿಷ್ಠ 30 ಸಾವಿರಕ್ಕೂ ಹೆಚ್ಚು ರಕ್ತ ಮಾದರಿಗಳು ಬಾಕಿ ಉಳಿವ ಸಾಧ್ಯತೆಯಿದೆ. ಇದಕ್ಕೆ ಹೆಚ್ಚುವರಿ ಕೆಲಸ ಮಾಡಬೇಕು. ಜತೆಗೆ ಒತ್ತಡವೂ ಹೆಚ್ಚಾಗಲಿದೆ. ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮತದಾರ ಪರಿಷ್ಕರಣೆ ಅಭಿಯಾನ ನಡೆಯುತ್ತದೆ. ಈ ವೇಳೆ ಲ್ಯಾಬ್ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತಿದೆ. ಸಾಕಷ್ಟು ಬಾರಿ ಮನವರಿಕೆ ಮಾಡಿದರೂ ನಿಯೋಜಿಸುತ್ತಾರೆ. ಹೀಗಾಗಿ, ಲ್ಯಾಬ್‌ನ ಪರೀಕ್ಷೆಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಪರೀಕ್ಷೆಗೆ ತೊಂದರೆ : ಸೆಂಟ್ರಲ್ ಮಲೇರಿಯಾ ಲ್ಯಾಬ್ ಆಗಿರುವುದರಿಂದ ನಿತ್ಯ ಸಾವಿರಾರು ಮಲೇರಿಯಾ ಹಾಗೂ ಪೈಲೇರಿಯಾ ರಕ್ತ ಮಾದರಿಗಳು ಪರೀಕ್ಷೆಗೆ ಬರುತ್ತವೆ. ಇಲ್ಲಿನ ಬಹುತೇಕ ಪ್ರಯೋಗಾಲಯ ತಂತ್ರಜ್ಞರು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ತೆರಳಿರುವುದರಿಂದ ನಿತ್ಯ 100 ರಕ್ತ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗುತ್ತಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇಂದು ಬಿಬಿಎಂಪಿಗೆ ಮನವಿ: ಸೆಂಟ್ರಲ್ ಮಲೇರಿಯಾ ಲ್ಯಾಬ್‌ನ ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ಪಡೆದಿರುವುದರಿಂದ ಆಗಿರುವ ಸಮಸ್ಯೆಗಳನ್ನು ತಿಳಿಯ ಪಡಿಸುವ ಮೂಲಕ ಚುನಾವಣಾ ಕಾರ್ಯದಿಂದ ವಿನಾಯ್ತಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.
* ಜಯಪ್ರಕಾಶ್ ಬಿರಾದಾರ್