Advertisement

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ವಿಶೇಷ ಆಂದೋಲನ

03:35 AM Jul 08, 2017 | Karthik A |

ಮಂಗಳೂರು: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳಲ್ಲಿ ಹೆಸರು ಬಿಟ್ಟು ಹೋಗಿರುವವರ ಹಾಗೂ 18-21 ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ವಿಶೇಷ ಆಂದೋಲನವನ್ನು ಜು. 1ರಿಂದ 31ರವರೆಗೆ ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್‌ ತಿಳಿಸಿದ್ದಾರೆ. ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

01.01.2017ರ ಅರ್ಹತಾ ದಿನಾಂಕದಂತೆ ಈಗಾಗಲೇ ತಯಾರಿಸಿ ಪ್ರಕಟಪಡಿಸಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ವಿಶೇಷ ಆಂದೋಲನ ಏರ್ಪಡಿಸಿದೆ. ವಿಶೇಷವಾಗಿ 18-19 ವಯಸ್ಸಿನ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಇದರ ಉದ್ದೇಶ. ಅದರಂತೆ 18ರಿಂದ 19 ವರ್ಷಗಳ ಮತದಾರರ ಲಿಂಗ ಅನುಪಾತವು 2011ರ ಜನಗಣತಿ ದಾಖಲಾತಿ ಹೊಂದಾಣಿಕೆಯಾಗಬೇಕು. ಮೃತಪಟ್ಟ/ವಲಸೆ ಹೋದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು, ತಿದ್ದುಪಡಿ, ಒಂದು ಬೂತ್‌ನಿಂದ ಇನ್ನೊಂದಕ್ಕೆ ವರ್ಗಾವಣೆ ಮತ್ತಿತರ ಕಾರ್ಯಗಳು ಈ ವಿಶೇಷ ಆಂದೋಲನದಲ್ಲಿ ನಡೆಯಲಿವೆ ಎಂದು ಅವರು ಹೇಳಿದರು. ಅರ್ಹರು ತಮ್ಮ ವ್ಯಾಪ್ತಿಯ ಬೂತ್‌ ಮಟ್ಟದ ಚುನಾವಣಾ ಅಧಿಕಾರಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ಶಿಕ್ಷಕರು/ ಗ್ರಾಮ ಕರಣಿಕರನ್ನು ಜುಲೈ ತಿಂಗಳಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಜುಲೈ 9 ಮತ್ತು 23ರಂದು ತಿಂಗಳಲ್ಲಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗಳಲ್ಲಿ ಬೂತು ಮಟ್ಟದ ಅಧಿಕಾರಿಯವರು ನಿಗದಿ ಪಡಿಸಿದ ನಮೂನೆ – 6, 7, 8 ಮತ್ತು 8ಎ ಯೊಂದಿಗೆ ಉಪಸ್ಥಿತರಿರುವರು.

ಈ ಅವಧಿಯಲ್ಲಿ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಲ್ಪಡದ ಸಾರ್ವಜನಿಕರು ಕ್ರಮವಾಗಿ ನಿಗದಿಪಡಿಸಿದ ನಮೂನೆ – 6ನ್ನು ಪಡೆದು ಭರ್ತಿಮಾಡಿ ನೀಡಬೇಕು. ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲ್ಪಟ್ಟ ವ್ಯಕ್ತಿಯು ಮೃತಪಟ್ಟಲ್ಲಿ/ವಲಸೆ ಹೋದಲ್ಲಿ ನಮೂನೆ-7ನ್ನು ಭರ್ತಿ ಮಾಡಿ ಸಲ್ಲಿಸಬೇಕು. ಮತದಾರರ ಪಟ್ಟಿಗಳಲ್ಲಿ ನೋಂದಾಯಿಸಲ್ಪಟ್ಟ ಹೆಸರು ಇತ್ಯಾದಿ ದಾಖಲೆಗಳ ತಿದ್ದುಪಡಿ ಅವಶ್ಯವಿದ್ದಲ್ಲಿ ನಮೂನೆ – 8ನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಲ್ಲದೆ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮನೆ ಬದಲಾವಣೆ ಮಾಡಿದಲ್ಲಿ ನಮೂನೆ-8ಎಯನ್ನು ಭರ್ತಿ ಮಾಡಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕವೂ
ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅಲ್ಲದೆ 1.01.2017ರಂದು 18 ವರ್ಷ ಪ್ರಾಯ ತುಂಬಿದವರು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಿಟ್ಟು ಹೋದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ಆನ್‌ಲೈನ್‌ ಮೂಲಕ ನಿಗದಿಪಡಿಸಿದ ನಮೂನೆಗಳನ್ನು ಡೌನ್‌ಲೋಡ್‌ ಮಾಡಿಕೊಂಡು ceokarnataka.kar.nic.in ವೆಬ್‌ಸೈಟ್‌ ಸಂಪರ್ಕಿಸಿ ಮನವಿ ಸಲ್ಲಿಸಬಹುದು.

ಮತದಾರರ ಪಟ್ಟಿಗಳಲ್ಲಿ ಮುದ್ರಿಸಲ್ಪಟ್ಟ ಮತದಾರರ ಭಾವಚಿತ್ರವು ಉತ್ತಮ ಗುಣಮಟ್ಟದಿಂದ ಮೂಡಿಬರದಿದ್ದಲ್ಲಿ ಮತದಾರರು ತಮ್ಮ ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರವನ್ನು ಸಂಬಂಧಪಟ್ಟ ತಹಶೀಲ್ದಾರರಿಗೆ ನೀಡಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಗಳ ಪರಿಷ್ಕರಣೆ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next