ಬೆಂಗಳೂರು: ಮತದಾರರ ಮಾಹಿತಿ ಸೋರಿಕೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಅದರ ನಡುವೆಯೇ ಇದೀಗ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವ ಪ್ರಕ್ರಿಯೆಯಲ್ಲೂ ಸಾಕಷ್ಟು ಲೋಪವಾಗಿರುವುದು ಬೆಳಕಿಗೆ ಬಂದಿದ್ದು, ಫಾರಂ-7 ಸಲ್ಲಿಕೆಯಾದಿದ್ದರೂ ಸುಮಾರು 1.69 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವ 6.69 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಬೆಂಗ ಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಹೀಗೆ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಸಂದರ್ಭದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದು ಫಾರಂ-7ರಲ್ಲಿ ಅವರಿಂದ ಸಹಿ ಹಾಕಿಸಿಕೊಳ್ಳಲಾಗಿದೆ ಎಂದೂ ತಿಳಿಸಲಾಗಿತ್ತು. ಆದರೀಗ 6.69 ಲಕ್ಷ ಮತದಾರರ ಪಟ್ಟಿ 1.69 ಲಕ್ಷ ಜನರಿಂದ ಫಾರಂ-7ಗೆ ಸಹಿ ಹಾಕಿಸಿಕೊಳ್ಳದೆ, ಅವರನ್ನು ಸಂಪರ್ಕಿಸದೆ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
1.69 ಲಕ್ಷ ಜನರ ಫಾರಂ-7 ಇಲ್ಲ?: ಮತದಾರರ ಮಾಹಿತಿ ಸೋರಿಕೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ವಿಚಾರವೂ ಮುನ್ನಲೆಗೆ ಬಂದಿತ್ತು. ಇದರ ಬಗ್ಗೆ ಬಿಬಿಎಂಪಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸಿದಾಗ ಪಟ್ಟಿಯಿಂದ ಹೆಸರು ತೆಗೆ ಯಲಾದ 6.69 ಲಕ್ಷ ಮತದಾರರ ಪೈಕಿ ಸುಮಾರು 1.69 ಲಕ್ಷ ಮತದಾರರ ಫಾರಂ-7 ಸಲ್ಲಿಕೆಯಾಗದಿದ್ದರೂ ಹೆಸರನ್ನು ಪಟ್ಟಿ ಯಿಂದ ತೆಗೆದುಹಾಕಲಾಗಿದೆ. ಅಲ್ಲದೆ ಫಾರಂ-7 ಇಲ್ಲದಿದ್ದರೂ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಅಗತ್ಯವಿರುವ ದಾಖಲೆಗಳೂ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಹೊಸದಾಗಿ ಮತಗಟ್ಟೆ ಅಧಿಕಾರಿಗಳ ನೇಮಕ: ಈ ರಾದ್ಧಾಂತಗಳು ಬೆಳಕಿಗೆ ಬರುತ್ತಿದ್ದಂತೆ ಹೊಸದಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರು, ಜಲಮಂಡಳಿ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿ ಇನ್ನಿತರ ಇಲಾಖೆಗಳ ಸಿಬ್ಬಂದಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ನೇಮಿಸಲಾಗುತ್ತಿದೆ. ನ. 15ರಿಂದ ನೇಮಕಾತಿ ಆದೇಶವನ್ನೂ ಸಿಬ್ಬಂದಿಗೆ ನೀಡಲಾಗುತ್ತಿದೆ. ಹೀಗೆ ನೇಮಕಾತಿ ಆದೇಶ ನೀಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆ ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ನೇಮಿಸಲಾಗುತ್ತಿದೆ ಎಂಬುದನ್ನು ತಿಳಿಸಲಾಗಿದೆ.
ಹೀಗೆ ನೇಮಕವಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯ ಕಸ್ಟೋಡಿಯನ್ ಆಗಿದ್ದು, ಮತದಾರರ ಪಟ್ಟಿಯನ್ನು ಸೆಕ್ಷನ್‌ವಾರು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ. ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಕಾರ್ಯನಿರ್ವ ಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ವರ್ಗಾ ವಣೆಗೊಂಡ ಮತ್ತು ಮೃತಪಟ್ಟ ಮತದಾರರ ಮಾಹಿತಿ ಸಂಗ್ರಹಿಸಿ ವರದಿ ಮಾಡಬೇಕು, ಮತದಾರರ ಪಟ್ಟಿಯಲ್ಲಿನ ಮೃತಪಟ್ಟ ಮತದಾರರು, ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ, ಮರಣ ಸಮರ್ಥನೆ ಪತ್ರದ ದಾಖಲೆಗಳೊಂದಿಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗೆ ಕಾಲಕಾಲಕ್ಕೆ ವರದಿ ನೀಡುವಂತೆ ತಿಳಿಸಲಾಗಿದೆ.
“ಮತದಾರರ ಹೆಸರು ಕೈಬಿಡಲು ಅಧಿಕಾರಿಗಳಿಂದ ಕರೆ ಬಂದಿತ್ತು’ ಫಾರಂ-7 ಸಲ್ಲಿಕೆಯಾಗದಿದ್ದರೂ ಹೆಸರು ತೆಗೆದುಹಾಕಿರುವ ಕುರಿತಂತೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಸೇರಿ ಇನ್ನಿತರ ಅಧಿಕಾರಿಗಳನ್ನು ಕೇಳಿದರೆ ಮತದಾರರ ಹೆಸರನ್ನು ತೆಗೆದು ಹಾಕಲು ಬಿಎಲ್‌ಒ ಸೇರಿ ಇನ್ನಿತರ ಅಧಿಕಾರಿಗಳಿಂದ ಕರೆ ಬಂದಿತ್ತು. ತಾವು ನಂತರ ದಾಖಲೆ ಸಲ್ಲಿಸುತ್ತೇವೆ. ಹೆಸರು ತೆಗೆದು ಹಾಕಿ ಎಂದು ಹೇಳಿದರು. ಹೀಗಾಗಿ ಹೆಸರು ತೆಗೆದು ಹಾಕಿದೆವು ಎಂಬ ಕುರಿತಂತೆ ಹಿರಿಯ ಅಧಿಕಾರಿಗಳೆದುರು ಹೇಳಿದ್ದಾರೆ ಎನ್ನಲಾಗಿದೆ.
“ಮತದಾರರ ಹೆಸರು ಕೈಬಿಡಲು ಅಧಿಕಾರಿಗಳಿಂದ ಕರೆ ಬಂದಿತ್ತು’: ಫಾರಂ-7 ಸಲ್ಲಿಕೆಯಾಗದಿದ್ದರೂ ಹೆಸರು ತೆಗೆದುಹಾಕಿರುವ ಕುರಿತಂತೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಸೇರಿ ಇನ್ನಿತರ ಅಧಿಕಾರಿಗಳನ್ನು ಕೇಳಿದರೆ ಮತದಾರರ ಹೆಸರನ್ನು ತೆಗೆದು ಹಾಕಲು ಬಿಎಲ್‌ಒ ಸೇರಿ ಇನ್ನಿತರ ಅಧಿಕಾರಿಗಳಿಂದ ಕರೆ ಬಂದಿತ್ತು. ತಾವು ನಂತರ ದಾಖಲೆ ಸಲ್ಲಿಸುತ್ತೇವೆ. ಹೆಸರು ತೆಗೆದು ಹಾಕಿ ಎಂದು ಹೇಳಿದರು. ಹೀಗಾಗಿ ಹೆಸರು ತೆಗೆದು ಹಾಕಿದೆವು ಎಂಬ ಕುರಿತಂತೆ ಹಿರಿಯ ಅಧಿಕಾರಿಗಳೆದುರು ಹೇಳಿದ್ದಾರೆ ಎನ್ನಲಾಗಿದೆ.
– ಗಿರೀಶ್ ಗರಗ