ವಿಜಯಪುರ: ರಾಜ್ಯದಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ಹಾಗೂ ಮತದಾರರ ಪಟ್ಟಿ ರೂಪಿಸುವಲ್ಲಿ ಅಕ್ರಮ ನಡೆದ ಹಗರಣ ಹಸಿರಾಗಿರುವ ಬೆನ್ನಲ್ಲೇ ವಿಜಯಪುರ ನಗರದಲ್ಲಿ ಅಂಥದ್ದೇ ತಾಜಾ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ ನಗರದ ವಾರ್ಡ್ ನಂ. 30 ರಲ್ಲಿ ಬುಧವಾರ ಮಧ್ಯಾಹ್ನ ಮತದಾರರ ಪಟ್ಟಿಯೊಂದಿಗೆ ಮತದಾರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದ ವ್ಯಕ್ತಿ ತನ್ನನ್ನು ತಾನು ಬಿಎಲ್‍ಎ ಎಂದು ಹೇಳಿಕೊಂಡಿದ್ದು, ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಕಾಂಗ್ರೆಸ್ ಮುಖಂಡರು ಆತನನ್ನು ಕೂಡಿಹಾಕಿದ್ದರು.
ಯುವಕನ ವರ್ತನೆಯಿಂದ ಅನುಮಾನಗೊಂಡ ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡುವಲ್ಲಿ ವಿಫಲನಾಗಿದ್ದಾನೆ. ಸದರಿ ಯುವಕ ತನ್ನನ್ನು ಮಹಾಂತೇಶ ಎಂದೂ, ಖಾಸಗಿ ಸಂಸ್ಥೆಯ ನೌಕರನೆಂದೂ ಹೇಳಿಕೊಂಡಿದ್ದಾನೆ. ಕೂಡಲೇ ವಿಜಯಪುರ ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಬ್ದುಲ್ ಹಮೀದ್ ಮುಶ್ರೀಫ್ ಬೆಂಬಲಿಗರು ಯುವಕನನ್ನು ಹಾಗೂ ಆತನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಇದರ ಬೆನ್ನಲ್ಲೇ ಆತಂಕಗೊಂಡ ಯುವಕ ಸ್ಥಳೀಯ ಶಾಸಕರ ಆಪ್ತ ಎಂಬ ವ್ಯಕ್ತಿ ಜೊತೆ ಮೊಬೈಲ್‍ನಲ್ಲಿ ಮಾತನಾಡಿ, ತನ್ನನ್ನು ಕೂಡಿ ಹಾಕಿರುವ ವಿಷಯ ತಿಳಿಸಿದ್ದಾನೆ. ಹೀಗಾಗಿ ಸದರಿ ಮತದಾರರ ಖಾಸಗಿ ಮಾಹಿತಿ ಸಂಗ್ರಹದ ಅಕ್ರಮ ಪ್ರಕರಣದಲ್ಲಿ ಸ್ಥಳೀಯ ಶಾಸಕರ ಕೈವಾಡ ಇದೆ ಎಂದು ಮುಶ್ರೀಫ್ ಆಪ್ತ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇರ್ಫಾನ್ ಶೇಖ್ ದೂರಿದ್ದಾರೆ.
ವಿಜಯಪುರ ನಗರ ವಿಧಾನಸಭೆ ಮುಸ್ಲಿಂ ಸಮುದಾಯದ ಹೆಚ್ಚಿರುವ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ರದ್ದು ಮಾಡುವ, ಇಲ್ಲವೇ ನಗರ ಕ್ಷೆತ್ರದ ಕೆಲಭಾಗವನ್ನು ಹೊಂದಿರುವ ನಾಗಠಾಣಾ ಮೀಸಲು ಕ್ಷೇತ್ರ ವ್ಯಾಪ್ತಿಯ ವಾರ್ಡ್‍ಗಳಿಗೆ ಮತದಾರರನ್ನು ವರ್ಗಾಯಿಸಲು ಇಂಥ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದಾರೆ.
ಬಳಿಕ ತಹಸೀಲ್ದಾರರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲದೇ, ತಮ್ಮ ವಶದಲ್ಲಿದ್ದ ಯುವಕನನ್ನು ತಹಸೀಲ್ದಾರ ಸಿದ್ಧರಾಯ ಭೋಸಗಿ ವಶಕ್ಕೆ ಒಪ್ಪಿಸಿದ್ದಾರೆ. ಯುವಕನನ್ನು ತಮ್ಮ ವಶಕ್ಕೆ ಪಡೆದ ತಹಸೀಲ್ದಾರರು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಬಿಎಲ್‍ಒ ಜೊತೆ ಸಂರ್ಪ ಸಾಧಿಸಲು ರಾಜಕೀಯ ಪಕ್ಷಗಳ ಏಜೆಂಟರನ್ನು ನೇಮಿಸಲು ಅವಕಾಶ ಇರುತ್ತದೆ. ಈ ಪ್ರಕರಣದಲ್ಲಿ ಅದೇ ಆಗಿರುವ ಸಾಧ್ಯತೆ ಇದೆ. ಯಾವುದಕ್ಕೂ ವಿಚಾರಣೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿದ್ಧರಾಯ ಭೋಸಗಿ ಸ್ಥಳದಲ್ಲಿದ್ದವರಿಗೆ ಹೇಳಿದರು.
ಆದರೆ ಸದರಿ ಬೆಳವಣಿಗೆ ಕುರಿತು ಜಿಲ್ಲಾಡಳಿತ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.