Advertisement

ಮತದಾರರ ಕರಡು ಪಟ್ಟಿ ಸಿದ್ಧ: ಜಿಲ್ಲಾಧಿಕಾರಿ ಕೂರ್ಮಾರಾವ್‌

01:17 AM Nov 10, 2022 | Team Udayavani |

ಉಡುಪಿ: ಜಿಲ್ಲೆಯ ಮತದಾರರ ಕರಡು ಪಟ್ಟಿ ಸಿದ್ಧವಾಗಿದ್ದು, ಹೊಸ ನೋಂದಣಿ, ಪರಿಷ್ಕರಣೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಜಿಲ್ಲೆಯಲ್ಲಿ 2022ರ ಅಂತಿಮ ಪಟ್ಟಿಯಲ್ಲಿ 10,12,842 ಮತದಾರರಿದ್ದರು. ಈಗ ಸಿದ್ಧಪಡಿಸಿರುವ 2023ರ ಕರಡು ಪಟ್ಟಿಯಲ್ಲಿ 10,05,452 ಮತದಾರರಿದ್ದಾರೆ. ಎರಡು ಕಡೆಗಳಲ್ಲಿ ನೋಂದಣಿ, ಮೃತರ ಹೆಸರು ತೆಗೆದು ಹಾಕದೇ ಇರುವುದು ಮೊದಲಾದವುಗಳನ್ನು ಸೂಕ್ಷ್ಮವಾಗಿ ಪರಿಷ್ಕರಿಸಿದ್ದು, ಸುಮಾರು 7,390 ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಿಲ್ಲೆಯಲ್ಲಿ 27,004 ಯುವ ಮತದಾರರು ನೋಂದಣಿಯಾಗಬೇಕಿತ್ತು. 13,529 ಯುವ ಮತದಾರರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 4,85,169 ಪುರುಷ ಹಾಗೂ 5,20,273 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಯುವ ಮತದಾರರು ಸೇರಿದಂತೆ 18,931 ಮತದಾರರು ಸೇರ್ಪಡೆಯಾಗಿದ್ದಾರೆ. 26,321 ಮಂದಿ ಡಿಲೀಶನ್‌ ಆಗಿದೆ. 123 ಮಂದಿ ಅನಿವಾಸಿ ಭಾರತೀಯ ಮತದಾರರಿದ್ದಾರೆ ಎಂದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ನ. 9ರಿಂದ ಡಿ. 8ರ ವರೆಗೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯಲಿದೆ. 2023ರ ಜ. 1, ಎ. 1, ಜು. 1 ಹಾಗೂ ಅ. 1ಕ್ಕೆ 18 ವರ್ಷ ತುಂಬಲಿರುವವರು ಈಗಲೇ ಅರ್ಜಿ ಸಲ್ಲಿಸಲು ಅವಕಾಶವಿದೆ. ತಿದ್ದುಪಡಿ, ಕ್ಷೇತ್ರ ಬದಲಾವಣೆ, ಡಿಲೀಶನ್‌ ಹೀಗೆ ಎಲ್ಲವನ್ನು ಓಟರ್‌ ಹೆಲ್ಪ್ ಲೈನ್ ಆ್ಯಪ್‌ ಮೂಲಕವೂ ಸುಲಭವಾಗಿ ಮಾಡಬಹುದು ಎಂದರು.

ಆಧಾರ್‌ ಜೋಡಣೆ: ಜಿಲ್ಲೆಯ ಒಟ್ಟು ಮತದಾರರಲ್ಲಿ 8,52,453 ಮತದಾರರು ಈಗಾಗಲೇ ಎಪಿಕ್‌ ಕಾರ್ಡ್‌ ಜತೆಗೆ ಆಧಾರ್‌ ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ. 84.78ರಷ್ಟು ಪ್ರಗತಿ ಸಾಧಿಸಿದ್ದೇವೆ. ಇದರಲ್ಲಿ 7.23 ಲಕ್ಷ ಮತದಾರರು ಓಟರ್‌ ಹೆಲ್ಪ್ ಲೈನ್ ಆ್ಯಪ್‌ ಮೂಲಕವೇ ಆಧಾರ್‌ ಜೋಡಣೆ ಮಾಡಿಸಿಕೊಂಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಉಪಸ್ಥಿತರಿದ್ದರು.

Advertisement

ಜಿಲ್ಲೆಯ ರಜತೋತ್ಸವ ಸಂಬಂಧ ವಿವಿಧ ಕಾರ್ಯಕ್ರಮಗಳ ಯೋಜನೆ ಸಿದ್ಧವಾಗುತ್ತಿದೆ. ಇಂದ್ರಾಳಿ ಸೇತುವೆ ಕಾಮಗಾರಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ.
– ಕೂರ್ಮಾರಾವ್‌ ಎಂ.,
ಜಿಲ್ಲಾಧಿಕಾರಿ ಉಡುಪಿ

ಕಾಲೇಜುಗಳಲ್ಲಿ ಅಭಿಯಾನ
ಜಿ.ಪಂ. ಸಿಇಒ ಪ್ರಸನ್ನ ಎಚ್‌. ಮಾತನಾಡಿ, ಯುವ ಮತದಾರರನ್ನು ಹೆಚ್ಚೆಚ್ಚು ನೋಂದಣಿ ಮಾಡಿಸುವ ಸಂಬಂಧ ಜಿಲ್ಲೆಯ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಅಭಿಯಾನ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಕೊರಗ ಕಾಲನಿಗಳಲ್ಲಿ ಸರ್ವೆ ಮೂಲಕ ಮತದಾರರ ಗುರುತಿನ ಚೀಟಿ ನೀಡುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next