Advertisement
ಮೈತ್ರಿ ಸರ್ಕಾರದಿಂದ ಅತೃಪ್ತಗೊಂಡು ಬೆಂಗಳೂರಿನ ಆರು ಶಾಸಕರು ರಾಜೀನಾಮೆ ನೀಡಿದ್ದು, ನಾಲ್ಕು ಶಾಸಕರು ಮುಂಬೈನಲ್ಲಿದ್ದರೆ, ಇಬ್ಬರು ಕ್ಷೇತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ. ಇದರಿಂದಾಗಿ ಆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಕಿವಿಗೊಡುವವರಿಲ್ಲದಂತಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.
Related Articles
Advertisement
ನಗರದ ಹೊರ ಭಾಗಗಳಾದ ಕೆ.ಆರ್.ಪುರ, ರಾಜರಾಜೇಶ್ವರಿ ನಗರ, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 110 ಹಳ್ಳಿಗೆ ಕುಡಿಯುವ ನೀರು ಹರಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅಗತ್ಯ ಸಹಕಾರ ನೀಡಲು ಹಾಗೂ ಪರಿಶೀಲನೆ ನಡೆಸಲು ಆ ಕ್ಷೇತ್ರದ ಶಾಸಕರಿಲ್ಲ. ಹೀಗಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿವೆ ಎನ್ನುತ್ತಾರೆ ಕ್ಷೇತ್ರದ ಕಾರ್ಪೋರೇಟರ್‌ಗಳು.
ಎಲ್ಲಾ ಸರಿ ಹೋಗುತ್ತೆ; ಎಲ್ರೂ ಬೇಗ ಬರ್ತಾರೆ: ಶಾಸಕರು ಹಿಂದಿರುಗುತ್ತಾರೋ ಇಲ್ಲವೋ? ಯಾವಾಗ ಬರುತ್ತಾರೆ? ಮತ್ತೆ ಚುನಾವಣೆಯೇ ನಡೆಯುತ್ತಾ? ಯಾರು ನಿಲ್ಲುತ್ತಾರೆ ಚುನಾವಣೆಗೆ? ನಿಮ್ಮ ಪಕ್ಷದ ಹೊಸ ಅಭ್ಯರ್ಥಿ ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕ್ಷೇತ್ರದ ಅತೃಪ್ತ ಶಾಸಕರ ಕ್ಷೇತ್ರದಲ್ಲಿ ಮತದಾರರು ಅಲ್ಲಿನ ಕಾರ್ಪೊರೇಟರ್‌ಗಳಿಗೆ ಕೇಳುತ್ತಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್‌ಗಳು “ಎಲ್ಲಾ ಸರಿ ಹೋಗುತ್ತದೆ, ಬೇಗ ಬರುತ್ತಾರೆ’ ಎಂದು ಉತ್ತರಿಸಿ ಮೌನವಾದರೆ, ಕೆಲ ಬಿಜೆಪಿ ಕಾರ್ಪೋರೇಟರ್‌ಗಳು ಶಾಸಕರ ನಡೆಗೆ ಬೇಸರ ವ್ಯಕ್ತಪಡೆಸುತ್ತಿದ್ದಾರೆ. ಸಮಸ್ಯೆ ಬಂದಾಗ ಜನರು ಬಿಬಿಎಂಪಿ ಸದಸ್ಯರನ್ನು ಸಂಪರ್ಕಿಸುತ್ತಾರೆ. ಆದರೆ, ಕೆಲವು ಕಾಮಗಾರಿಗಳು ಶಾಸಕ ಅನುದಾನದಲ್ಲಿ ನಡೆಯುತ್ತಿದ್ದು, ಅವುಗಳಿಗೆ ನುದಾನ ಬಿಡುಗಡೆಯಾಗಲು ಶಾಸಕರ ಅನುಮೋದನೆ ಆಗಬೇಕು ಎಂದು ಪಾಲಿಕೆ ಸದಸ್ಯರು ಹೇಳುತ್ತಿದ್ದಾರೆ.
ಇದರಿಂದ ರಾಜರಾಜೇಶ್ವರಿ ನಗರ, ಯಶವಂತಪುರ, ಕೆ.ಆರ್.ಪುರದಲ್ಲಿ ಆಸ್ಪತ್ರೆ ಕಟ್ಟಡ, ಸುರಂಗ ಮಾರ್ಗ, ಕೆಳ ಸೇತುವೆ ಕಾಮಗಾರಿ ಸೇರಿಂದತೆ ವಿವಿಧ ಕಾಮಗಾರಿಗಳ ಪ್ರಗತಿಗೆ ತೊಡಕಾಗಿದೆ. ಇನ್ನು ಶಾಸಕರ ಅನುದಾನದಲ್ಲಿ ಗುತ್ತಿಗೆ ಪಡೆದವರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಂಬೇಡ್ಕರ್‌ನಗರ, ಲಕ್ಷ್ಮಣಮೂರ್ತಿ ನಗರ ಕೊಳಚೆ ಪ್ರದೇಶಗಳಲ್ಲಿ ಒಂದಿಷ್ಟು ಮಳೆ ಬಂದರು ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಳೆಗಾಲ ಹಿನ್ನೆಲೆ ರಾಜಕಾಲವೆ ಸುಸ್ಥಿತಿಗೆ ತರಲು ಟೆಂಡರ್ ಆಗಬೇಕಿತ್ತು. ಆದರೆ, ಶಾಸಕರಿಲ್ಲದೆ ಈ ಕೆಲಸಗಳು ನಿಂತಿವೆ. ಮತದಾರರು ಕ್ಷೇತ್ರದ ಶಾಸಕ ಕುರಿತು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. -ಎಸ್.ರಾಜು, ವಿಜಿನಾಪುರ ಬಿಬಿಎಂಪಿ ಸದಸ್ಯ (ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ) ಮೈತ್ರಿ ಸರ್ಕಾರ ಹಗ್ಗ ಜಗ್ಗಾಟದಲ್ಲಿ ನಮ್ಮ ಸಮಸ್ಯೆ ಕೇಳುವವರಿಲ್ಲ. ಕಾಮಗಾರಿ ಬೇಕಾಬಿಟ್ಟಿಯಲ್ಲಿ ನಡೆಯುತ್ತಿವೆ. ಕ್ಷೇತ್ರದ ಕಾಮಗಾರಿ ಪ್ರಗತಿ ಹಾಗೂ ನೀರಿನ ಸಮಸ್ಯೆ ಕುರಿತು ಕಾರ್ಪೋರೇಟರ್ ಬಳಿ ಪ್ರಶ್ನಿಸಿದರೆ ಅವರು ಶಾಸಕರ ಅನುದಾನದಲ್ಲಿ ಆಗಬೇಕಾದ ಕೆಲಸ ಎಂದು ಹೇಳಿತ್ತಾರೆ. ಅವರನ್ನು ಕೇಳ್ಳೋಣ ಎಂದರೆ ಮುಂಬೈನಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ, ಬೇಡಿಕೆ ಕೇಳುವರಿಲ್ಲ
-ಆನಂದ, ರಾಮಮೂರ್ತಿ ನಗರ ನಿವಾಸಿ