ಆಲಮೇಲ: ರಸ್ತೆ, ಕುಡಿಯುವ ನೀರು ಸೇರಿದಂತೆ ಗುಂದಗಿ ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕೆಲಸಕ್ಕೆ 5.20 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಂದು ವರ್ಷದ ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ವೇಗದಲ್ಲಿ ಕೆಲಸ ಮಾಡುವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ಮತಕ್ಷೇತ್ರದ ಗುಂದಗಿಯಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಂದಗಿ ಗ್ರಾಮದ ಅಭಿವೃದ್ಧಿಗಾಗಿ ಮಂಜೂರು ಮಾಡಿರುವ 5.20 ಕೋಟಿ ರೂ. ಅನುದಾನದಲ್ಲಿ 3.67 ಲಕ್ಷ ರೂ. ಗುಂದಗಿ ಗ್ರಾಮದಿಂದ ದೇವರನಾವದಗಿ ಎಲ್‌ಟಿವರೆಗೆ ರಸ್ತೆ ಸುಧಾರಣೆಗೆ ಬಳಸಲಾಗುವುದು. ಎಸ್‌ಡಿಪಿ ಯೋಜನೆ ಅಡಿಯಲ್ಲಿ ಗುಂದಗಿ ಮತ್ತು ಅಲಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ 1.38 ಕೋಟಿ ರೂ. ಮಂಜೂರು ಮಾಡಲಾಗಿದೆ. ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 12 ಲಕ್ಷ ರೂ. ಮಂಜೂರು ಮಾಡಲಾಗಿದೆ. ಗುಂದಗಿ ಗ್ರಾಮದ ಬಹು ದಿನಗಳ ಬೇಡಿಕೆಯಾಗಿರುವ ಗುರುಪಾದೇಶ್ವರ ಸಭಾ ಭವನಕ್ಕೆ ಮುಜರಾಯಿ ಇಲಾಖೆಯಿಂದ 10 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದರು.
ಸಿಂದಗಿ ಕ್ಷೇತ್ರದ ಜನ ಉಪ ಚುನಾವಣೆಯಲ್ಲಿ ನನಗೆ ಬೆಂಬಲಿಸಿದ ಕ್ಷೇತ್ರದ ಜನತೆಗೆ ಅಭಿವೃದ್ಧಿ ಕೆಲಸ ಮಾಡಿ ಋಣ ತೀರಿಸುವೆ. ಒಂದು ವರ್ಷದ ನನ್ನ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡುವೆ. ಎಲ್ಲ ಕಾಮಗಾರಿಗಳು ಅತಿ ವೇಗವಾಗಿ ಮಾಡುತ್ತೆನೆ. ರೈತರ ರಸ್ತೆ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಪಡೆದುಕೊಂಡು ರೈತರ ಜಮೀನುಗಳಿಗೆ ತೆರಳುವ ರಸ್ತೆ ಕಾಮಗಾರಿ ಮಾಡುತ್ತೇನೆ ಎಂದು ಹೇಳಿದರು.
ಗ್ರಾಮದ ಶಿವಯ್ಯ ಮಠ ಸಾನ್ನಿಧ್ಯ ವಹಿಸಿದ್ದರು. ಶ್ರೀಮಂತ ನಾಗೂರ, ಬಿ.ಆರ್. ಎಂಟಮಾನ, ಗುರುಪಾದಗೌಡ ಭಾಸಗಿ, ಶಿವಶಂಕರ ಕರಜಗಿ, ಶಿವಲಿಂಗಪ್ಪ ಕುಮಸಿ, ಈರಣ್ಣ ರಾವೂರ, ಸುರೇಶ ಕಿರಣಗಿ, ಬಾಬು ತಾರಾಪೂರ, ಮಲಕಪ್ಪ ಕ್ಯಾಮಗೊಂಡ, ಶಂಕ್ರೆಪ್ಪ ಕಟ್ಟಿ, ಶರಣಪ್ಪ ಕಟ್ಟಿ, ಕುಮಾರಗೌಡ ಪಾಟೀಲ, ಲೋಕೊಪಯೋಗಿ ಅಧಿಕಾರಿ ತಾರಾನಾಥ, ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಭಾಗ್ಯಶ್ರೀ, ಗುತ್ತಿಗೆದಾರ ಶಿವಪುತ್ರ ಕಾರ್ನಳ, ಎಸ್.ಎಂ. ಉಳ್ಳಾಗಡ್ಡಿ ಇದ್ದರು.