Advertisement

‘ಮತವನ್ನು ನಿಸ್ವಾರ್ಥ ಅಭ್ಯರ್ಥಿಗೆ ನೀಡಿ’

01:08 PM May 04, 2018 | Team Udayavani |

ನರಿಂಗಾನ: ಪ್ರಜಾಪ್ರಭುತ್ವದ ಅಡಿಗಲ್ಲಾಗಿರುವ ಚುನಾವಣ ಪ್ರಕ್ರಿಯೆಯಲ್ಲಿ ಪ್ರಭುಗಳಾಗಿರುವ ಮತದಾರರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನು ಸತ್ಯತೆ, ನ್ಯಾಯಪರತೆ, ಮಾನವೀಯತೆ ಹಾಗೂ ಸೇವಾ ಭಾವನೆಯುಳ್ಳ ನಿಸ್ವಾರ್ಥ ಅಭ್ಯರ್ಥಿಗೆ ನೀಡಿ ಉತ್ತಮ ಪ್ರತಿನಿಧಿಯನ್ನು ಆರಿಸಿ ಎಂದು ಮಹಾತ್ಮ ಗಾಂಧಿ ನರೇಗಾ ಮಾಜಿ ಓಂಬುಡ್ಸ್‌ಮೆನ್‌ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿದ್ಯಾನಗರ ಅಂಗನವಾಡಿ ಕೇಂದ್ರದಲ್ಲಿ ಮತದಾನೋತ್ಸವ, ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮತದಾರರ ಮಾಹಿತಿ ಪತ್ರಗಳನ್ನು ವಿತರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಸುಳ್ಳು ಭರವಸೆಗಳಿಗೆ ಮರುಳಾಗದೆ ಅತ್ಯುತ್ತಮ, ಜನಪರ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದಕ್ಕೆ ಸಿದ್ಧರಾಗಬೇಕು ಎಂದರು. ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಮತದಾರರಿಗೆ ಮತದಾನ ಕೇಂದ್ರದಲ್ಲಿ ಒದಗಿಸಲಾಗುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಗ್ರಾಮದ ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಟ್ರಸ್ಟ್‌ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿಯರಾದ ಚಂಚಲಾ, ರೂಪಾಕಲಾ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಾದ ನಳಿನಿ, ರಜನಿ, ಪತ್ರಕರ್ತ ಗುರುವಪ್ಪ ಬಾಳೆಪುಣಿ ಮೊದಲಾದವರು ಮಾಹಿತಿ ವಿನಿಮಯ ಸಂವಾದ ಚರ್ಚೆಯಲ್ಲಿ ಭಾಗವಹಿಸಿದರು. ಮತದಾರರು ತಪ್ಪದೇ ಮತದಾನ ಮಾಡವುದಾಗಿ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಸಹಾಯಕಿ ಸುಮಲತಾ ಕಾರ್ಯಕ್ರಮದ ಯಶಸ್ವಿ ಸಂಯೋಜನೆಗೆ ಸಹಕರಿಸಿದ್ದರು.

ಜನ ಶಿಕ್ಷಣ ಟ್ರಸ್ಟ್‌, ಸುಗ್ರಾಮ ಜಾಗೃತಿ ವೇದಿಕೆ, ಆಪ್ನಾದೇಶ್‌ ಬಳಗ, ಚಿತ್ತಾರ ಬಳಗ, ಗ್ರಾಮ ವಿಕಾಸ ಕೇಂದ್ರ, ಅಂಗನವಾಡಿ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next