Advertisement

ಉತ್ತಮ ಅಭ್ಯರ್ಥಿ ಆಯ್ಕೆಗೆ ಮತದಾರರಲ್ಲಿ ಜಾಗೃತಿ

11:44 AM Mar 27, 2019 | Lakshmi GovindaRaju |

ಬೆಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೂರ್ಣ ಇತಿಹಾಸವನ್ನು ಕ್ಷೇತ್ರದ ಮತದಾರರ ಮುಂದಿಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಗರ “ವರ್ತೂರು ರೈಸಿಂಗ್‌’ ಎಂಬ ನಾಗರಿಕ ವೇದಿಕೆ ಮುಂದಾಗಿದೆ.

Advertisement

ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಸಿಲಿಕಾನ್‌ ಸಿಟಿಯಲ್ಲಿ ಮತದಾನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಹೀಗಾಗಿ, ಇಲ್ಲಿನ ನಾಗರಿಕರನ್ನು ಮತದಾನಕ್ಕೆ ಪ್ರೇರೇಪಿಸಲು ನಗರದ ವಿವಿಧೆಡೆ ಚುನಾವಣಾ ಆಯೋಗದ ಅಧಿಕಾರಿಗಳಿಂದ ಹಿಡಿದು ಸ್ವಯಂ ಸೇವಕ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಹಿತರಕ್ಷಣಾ ವೇದಿಕೆಗಳು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ನಾಗರಿಕ ವೇದಿಕೆಗಳು ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಿವೆ.

ಅಂತಹವುಗಳ ಪೈಕಿ ವರ್ತೂರು ರೈಸಿಂಗ್‌ ಎಂಬ ನಾಗರಿಕ ವೇದಿಕೆಯು ಈ ಬಾರಿ ತಮ್ಮ ವ್ಯಾಪಿಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಯ ಇತಿಹಾಸ, ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು, ಅವರ ಭವಿಷ್ಯದ ಚಿಂತನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ “ಉತ್ತಮ ಅಭ್ಯರ್ಥಿ ಆಯ್ಕೆ ಹಾಗೂ ಅದಕ್ಕಾಗಿ ಕಡ್ಡಾಯ ಮತದಾನಕ್ಕೆ” ಪ್ರೇರೇಪಿಸುತ್ತಿದೆ.

ಕಳೆದ ನಾಲ್ಕು ವರ್ಷದಿಂದ ಕೆರೆ ಉಳಿಸುವ, ಪರಿಸರ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವ ಈ ವೇದಿಕೆಯು ಚುನಾವಣೆ ಸಂದರ್ಭದಲ್ಲಿ ಕಡ್ಡಾಯ ಮತದಾನದ ಕಾರ್ಯಕ್ರಮವನ್ನು ಮಾಡುತ್ತಾ ಬಂದಿತ್ತು. ಆದರೆ, ಈ ಬಾರಿ “ಚುಣಾವಣೆ ಹಾಗೂ ಸ್ಪರ್ಧಿಸಿರುವ ಅಭ್ಯರ್ಥಿಗಳ” ಕುರಿತು ಮತದಾರರಿಗಿರುವ ಮಾಹಿತಿ ಕೊರತೆ ದೂರ ಮಾಡುವುದು.

ಜತೆಗೆ ಏ.18ರಂದು ಕಡ್ಡಾಯ ಮತದಾನ ಮಾಡಿಸುವ ಗುರಿಯನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ಕೆ ಮುಂದಾಗಿದೆ. ಸದ್ಯ ವೇದಿಕೆಯಲ್ಲಿ ವಿಭಾಗವಾರು 115 ಮಂದಿ ಸ್ವಯಂ ಸೇವಕರಿದ್ದು, ಇವರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳು, ನಿವಾಸಿ ಕ್ಷೇಮಾಭಿವೃದ್ಧಿ ಸಂಘ-ಸಂಸ್ಥೆಗಳಿಗೆ ಭೇಟಿ ಮಾಡಿ ಅಲ್ಲಿನ ಮುಖಂಡರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಂಡು ಅವರ ಮೂಲಕ ಅಲ್ಲಿನ ಮತದಾರರ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಏಲ್ಲಿಂದ ಮಾಹಿತಿ? ಏನೆಲ್ಲಾ ಮಾಹಿತಿ?: ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಲ್ಲಿಸಿರುವ ಅಫಿಡೆವೆಟ್‌ಗಳನ್ನು ಈ ವೇದಿಕೆ ಸದಸ್ಯರು ಪರಾಮರ್ಶಿಸುತ್ತಾರೆ. ಅದರಲ್ಲಿ ಪ್ರಮುಖ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ, ರಾಜಕೀಯ ಇತಿಹಾಸ, ಕುಟುಂಬ ಹಿನ್ನೆಲೆ, ಆಸ್ತಿ ವಿವರ, ಭ್ರಷ್ಟಾಚಾರ ಚಟುವಟಿಕೆಯಲ್ಲಿ ಭಾಗಿದಾರರಾಗಿದ್ದರೇ?, ಕ್ರಿಮಿನಲ್‌ ಅಪರಾಧಗಳು ದಾಖಲಾಗಿವೆಯೇ?, ಜೈಲಿಗೆ ಹೋಗಿದ್ದಾರೆಯೇ? ಎಂಬ ಪ್ರಮುಖ ಅಂಶಗಳನ್ನು ಸಂಗ್ರಹಿಸಿ ಅದರ ಸಾರಾಂಶವನ್ನು ಮತದಾರರ ಮುಂದಿಡಲಾಗುತ್ತಿದೆ.

ಈ ಮಾಹಿತಿ ನೀಡಲು ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ನಂತಹ ಸಾಮಾಜಿಕ ಜಾಲತಾಣ, ಕರ ಪತ್ರ ಹಂಚಿಕೆ, ಕ್ಷೇಮಾಭಿವೃದ್ಧಿ ಸಂಘಗಳ ಸಭೆಗಳನ್ನು ಕರೆಯಲಾಗುತ್ತಿದೆ. ರಜಾದಿನಗಳಲ್ಲಿ ಬಡಾವಣೆಗಳಿಗೆ ಹೋಗಿ ಮತದಾನ ಅರಿವು, ಸೂಕ್ತ ಅಭ್ಯರ್ಥಿ ಆಯ್ಕೆ ಅವಶ್ಯಕತೆ ತಿಳಿಸಲಾಗುತ್ತಿದೆ ಎಂದು ವೇದಿಕೆ ಸದಸ್ಯ ಜಗದೀಶ್‌ ರೆಡ್ಡಿ ತಿಳಿಸಿದರು.

ಅಭ್ಯರ್ಥಿ ಗಮನಕ್ಕೆ ಪ್ರಣಾಳಿಕೆ: ವರ್ತೂರು ಸುತ್ತಮುತ್ತಲಿನ ಕ್ಷೇಮಾಭಿವೃದ್ಧಿ ಸಂಘಗಳ ಸಭೆ ನಡೆಸಿ ಈ ಭಾಗದ ಸಮಸ್ಯೆಗಳು, ಮತದಾರರ ಬೇಡಿಕೆಗಳು ಕುರಿತ ಪ್ರಣಾಳಿಕೆಯೊಂದನ್ನು ಸಿದ್ಧಪಡೆಸಿ ಅದನ್ನು ಈ ಬಾರಿ ಚುನಾವಣೆಗೆ ಸ್ಫರ್ಧಿಸಿರುವ ಅಭ್ಯರ್ಥಿಗಳಿಗೆ ನೀಡುತ್ತೇವೆ ಎಂದು ವೇದಿಕೆ ಸದಸ್ಯರು ತಿಳಿಸಿದರು.

ಏನೆಲ್ಲ ಜಾಗೃತಿ?: ರಾಜಕಾರಣಿಗಳು ಯಾವ ರೀತಿಯಲ್ಲಿ ಅಶ್ವಾಸನೆಗಳನ್ನು ಕೊಡುತ್ತಾರೆ, ಅವುಗಳನ್ನು ಈಡೇರಿಸಲು ಇರುವ ಸವಾಲುಗಳೇನು? ಜಾತಿ, ಧರ್ಮದ ಹೆಸರಲ್ಲಿ ಯಾವ ರೀತಿ ಪ್ರಚೋದನೆ ಮಾಡುತ್ತಾರೆ. ಚುನಾವಣೆ ಸಮಯದಲ್ಲಿ ಬಂದಿರುವ ಸಾಲು ರಜೆ, ಆ ಸಮಯದಲ್ಲಿ ಪ್ರವಾಸ ಇನ್ನಿತರ ಕೆಲಸಕ್ಕಿಂತ ಮತದಾನ ಎಷ್ಟು ಮುಖ್ಯ ಎಂಬಿತ್ಯಾದಿ ಅಂಶಗಳ ಜಾಗೃತಿ ಮೂಡಿಸಲಾಗುತ್ತಿದೆ.

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next