Advertisement

ಶಾಲಾ ಶಿಕ್ಷಕರಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಹೊರೆ

06:05 AM Dec 21, 2017 | Team Udayavani |

ಬೆಂಗಳೂರು: ಚುನಾವಣೆ ಬಂತೆಂದರೆ ಶಿಕ್ಷಕರಿಗೆ ಒಂದಲ್ಲೊಂದು “ಶಿಕ್ಷೆ’ ಇದ್ದೇ ಇರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆಯ ಹೊರೆ ಈಗ ಶಿಕ್ಷಕರ ಹೆಗಲಿಗೇರಿದೆ. ಸರ್ಕಾರಿ ಶಾಲೆಯ ಸಾವಿರಾರು ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆಗೆ ನಿಯೋಜನೆ ಮಾಡಿರುವುದರಿಂದ ಪರೀಕ್ಷೆಯನ್ನು ಎದುರು ನೋಡುತ್ತಿರುವ ಮಕ್ಕಳು ಕಂಗೆಟ್ಟಿದ್ದಾರೆ.

Advertisement

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಕರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜನವರಿ ಅಂತ್ಯದವರೆಗೂ ಪಟ್ಟಿ ಪರಿಷ್ಕರಣೆ ಕಾರ್ಯ ಇರುವುದರಿಂದ ಶಿಕ್ಷಕರು ಅದರತ್ತಲೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಮತದಾರ ಪಟ್ಟಿ ಪರಿಷ್ಕರಣೆ ಸಂಬಂಧ ಈಗಾಗಲೇ ಚುನಾವಣಾ ಆಯೋಗದಿಂದ ಶಿಕ್ಷಕರಿಗೆ 15 ದಿನಗಳ ತರಬೇತಿ ನೀಡಲಾಗಿದೆ. ಪ್ರತಿ ಬೂತ್‌ಗೂ ಶಿಕ್ಷಕರನ್ನೇ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಒ)ಯಾಗಿ ನೇಮಿಸಲಾಗಿದೆ.

ತಂತ್ರಜ್ಞಾನ ಸಾಕಷ್ಟು ಮುಂದುವರಿದ್ದರೂ, ಶಿಕ್ಷಕರು ಮನೆ ಮನೆಗೆ ಹೋಗಿ ಮತದಾರರ ವಿವರ ಪಡೆಯುವ ಗೋಳು ತಪ್ಪಿಲ್ಲ. ಬಿಎಲ್‌ಒಗಳು ಆಯಾ ಬೂತ್‌ನ ಪ್ರತಿ ಮನೆಗೂ ಭೇಟಿ ನೀಡಬೇಕು. ಹೊಸ ಅರ್ಜಿಗಳ ಸ್ವೀಕಾರ, ತಿದ್ದುಪಡಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಸೇರಿದಂತೆ ಹಲವು ಕಾರ್ಯ ಮಾಡಬೇಕು. ಇದರ ವರದಿಯನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಬೇಕು. ಈ ಮಧ್ಯೆ ಮಕ್ಕಳಿಗೆ ಪಾಠವನ್ನೂ ಮಾಡಬೇಕಿರುವುದರಿಂದ ಹೈರಾಣಾಗಿದ್ದಾರೆ.

ಸಂಕಷ್ಟದಲ್ಲಿ  ವಿದ್ಯಾರ್ಥಿಗಳು : ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿಗಳಿಗೆ 2018ರ ಮಾರ್ಚ್‌ನಲ್ಲಿ ಪರೀಕ್ಷೆ ನಡೆಯಲಿದೆ. ಬಹುತೇಕ ವಿದ್ಯಾರ್ಥಿಗಳು ಈಗಿಂದಲೇ ಪರೀಕ್ಷಾ ಸಿದ್ಧತೆ ಆರಂಭಿಸಿದ್ದಾರೆ. 

Advertisement

ಖಾಸಗಿ ಶಾಲೆಯಲ್ಲಿ ಪಠ್ಯದ ಪುನರಾವರ್ತನೆ ಕೂಡ ಆರಂಭವಾಗಿದೆ. ಸರ್ಕಾರಿ ಶಾಲಾ ಶಿಕ್ಷಕರು 60 ದಿನಗಳ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಶಾಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳುತ್ತದೋ ಅಥವಾ ಇಲ್ಲವೋ ಎಂಬ ಭಯ ವಿದ್ಯಾರ್ಥಿಗಳನ್ನು ಆವರಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಪೂರ್ವದಲ್ಲೇ ಒಂದರಿಂದ 9ನೇ ತರಗತಿಯ ಪಠ್ಯಕ್ರಮ ಮುಗಿದಿರಬೇಕು.

ಶಿಕ್ಷಕರಿಗೇಕೀ ಶಿಕ್ಷೆ ?:
ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರಲ್ಲಿ 1.50 ಲಕ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ನೌಕರರೆಂದರೆ ಕಣ್ಮುಂದೆ ಬರುವುದು ಶಿಕ್ಷಕರು ಮಾತ್ರ. ಶಿಕ್ಷಕರು ಶೈಕ್ಷಣಿಕವಾಗಿಯೂ ಪ್ರಬುದ್ಧತೆ ಸಾಧಿಸಿರುತ್ತಾರೆ. ಹೀಗಾಗಿ ಸರ್ಕಾರದ ಸಮೀಕ್ಷೆ, ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನೇ ಹೆಚ್ಚು ತೊಡಗಿಸಿಕೊಳ್ಳಲಾಗುತ್ತದೆ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆಯಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಕಾರ್ಯಕರ್ತರು, ಗ್ರಾಮ ಸೇವಕರು, ಗ್ರಾಮ ಲೆಕ್ಕಿಗರು, ಪಿಡಿಒಗಳು ಇದ್ದಾರೆ. ಇವರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದು ಬಹಳ ಕಡಿಮೆ.

ಸರ್ಕಾರಕ್ಕೆ ಮನವಿ
2008ರ ಆದೇಶದಂತೆ ಶಾಲಾ ಶಿಕ್ಷಕರನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಸರ್ಕಾರಿ ಶಾಲೆಯ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ನಿಯೋಜಿಸಿರುವ ಶಿಕ್ಷಕರನ್ನು ತೆರವುಗೊಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಚುನಾವಣಾ ಆಯೋಗಕ್ಕೆ, ಶಿಕ್ಷಣ ಸಚಿವರಿಗೆ  ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ.

ಶೌಚಾಲಯ ಸಮೀಕ್ಷೆ: ಸ್ವತ್ಛ ಭಾರತ್‌ ಅಭಿಯಾನದಡಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯ ಶಿಕ್ಷಕರನ್ನು ಮನೆ ಮನೆಯ ಶೌಚಾಲಯ ಸಮೀಕ್ಷೆಗೆ ನೇಮಿಸಲಾಗಿದೆ. ಜಿಪಂನಿಂದ ನಡೆಸುತ್ತಿರುವ ಶೌಚಾಲಯಗಳ ಸಮೀಕ್ಷೆಯ ಹೊಣೆಯನ್ನು ಶಿಕ್ಷಕರಿಗೆ ಒಪ್ಪಿಸಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರಿ ಶಾಲೆಯ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಅನ್ಯಕಾರ್ಯಕ್ಕೆ ನೇಮಿಸಬಾರದು. 2 ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ನಿಯೋಜಿಸಿರುವ ಶಿಕ್ಷಕರನ್ನು ತೆರವು ಮಾಡಬೇಕು.
– ಬಸವರಾಜ ಗುರಿಕಾರ, ಅಧ್ಯಕ್ಷ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಮತದಾರರ ಪಟ್ಟಿ ಪರಿಷ್ಕರಣೆಗೆ ಶಿಕ್ಷಕರ ನೇಮಕಾತಿ ಜಿಲ್ಲಾಮಟ್ಟದ ಅಧಿಕಾರಿಗಳ ಮೂಲಕ ನಡೆದಿದೆ. ಆಯಾ ತಾಲೂಕಿನ ಚುನಾವಣಾ ಬೂತ್‌ಗಳ ಅಗತ್ಯಕ್ಕೆ ಅನುಗುಣವಾಗಿ ರಾಜ್ಯಾದ್ಯಂತ ಸಾವಿರಾರು ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
– ಡಾ.ಪಿ.ಜಿ.ಜಾಫ‌ರ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next