Advertisement

ಸಮಾಜದ ಉದ್ಧಾರಕ್ಕಾಗಿ ಮತ ಚಲಾಯಿಸಿ

11:25 AM Jan 29, 2018 | Team Udayavani |

ಕಲಬುರಗಿ: ದೇಶದ ಸಂವಿಧಾನ ಪ್ರತಿಯೊಬ್ಬರಿಗೆ ಮತದಾನದ ಮೂಲಭೂತ ಹಕ್ಕು ನೀಡಿದೆ. ಚುನಾವಣೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಗಾಗಿ ಮತವನ್ನು ಸ್ವಾರ್ಥಕ್ಕಾಗಿ ಚಲಾಯಿಸದೇ ಸಮಾಜದ ಉದ್ಧಾರಕ್ಕಾಗಿ ಸದುಪಯೋಗ
ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಸೇಡಂ ಮತಕ್ಷೇತ್ರದ ಬೀರನಳ್ಳಿ ಗ್ರಾಮದಲ್ಲಿ 2016-17ನೇ ಸಾಲಿನ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬೀರನಳ್ಳಿ ಕ್ರಾಸ್‌ನಿಂದ ಮಳಖೇಡ ಮೂಲಕ ಬೀಜನಳ್ಳಿವರೆಗಿನ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಜಾತಿ, ಜನಾಂಗಗಳ ನಡುವೆ ಬೇಧ ಉಂಟು ಮಾಡದೇ ಎಲ್ಲರನ್ನೂ ಒಗ್ಗೂಡಿಸಿ ಅಭಿವೃದ್ಧಿಪಡಿಸುತ್ತಿದೆ. ಬಡವರಲ್ಲಿ ವಿಶ್ವಾಸ ಮೂಡಿಸಿ ಆತ್ಮಗೌರವದಿಂದ ಬಾಳುವಂತೆ
ಮಾಡಿದೆ. ಮುಖ್ಯಮಂತ್ರಿಗಳು ದಾಸೋಹದ ತತ್ವದ ತಳಹದಿಯಲ್ಲಿ ಇಡೀ ರಾಜ್ಯಕ್ಕೆ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರೆ. ಬಡವರ ಉದ್ಧಾರಕ್ಕೆ ಅನೇಕ ಯೋಜನೆ ರೂಪಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದು ಹೇಳಿದರು. 

ಪ್ರಸಕ್ತ ವರ್ಷ ಪ್ರತಿ ಕ್ವಿಂಟಲ್‌ಗೆ 6000 ರೂ.ಗಳ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ 550 ರೂ. ಸಹಾಯಧನ ನೀಡುತ್ತಿದೆ. ಕಡಲೆ ಬೆಳೆ ದರ ಕುಸಿತವಾಗಿದೆ. ಹಾಗಾಗಿ ತೊಗರಿ ಖರೀದಿ ಕೇಂದ್ರಗಳಲ್ಲಿಯೇ ಪ್ರತಿ ಕ್ವಿಂಟಲ್‌ಗೆ 4400 ರೂ. ಪ್ರೋತ್ಸಾಹಧನದಲ್ಲಿ ಇನ್ನೆರಡು ದಿನಗಳಲ್ಲಿ ಕಡಲೆ ಖರೀದಿ ಪ್ರಾರಂಭಿಸಲು ಆದೇಶ ನೀಡಲಾಗಿದೆ ಎಂದು ಹೇಳಿದರು.

ಸೇಡಂ ಮತಕ್ಷೇತ್ರದಲ್ಲಿ ಕಮಲಾವತಿ ಮತ್ತು ಕಾಗಿಣಾ ನದಿಗಳಿಗೆ ಬ್ರಿಜ್ಡ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದು ನೀರಾವರಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

Advertisement

ಬೀಜನಳ್ಳಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬೀಜನಳ್ಳಿ ಗ್ರಾಮದ ಶ್ರೀ ಶಿವಶರಣ ಹರಳಯ್ಯ ದಂಪತಿ ಪಾದುಕೆಗಳ ದೇವಸ್ಥಾನದ ಹತ್ತಿರ ನಿರ್ಮಿಸಲು ಉದ್ದೇಶಿಸಲಾಗಿರುವ ಯಾತ್ರಿ ನಿವಾಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, 12ನೇ ಶತಮಾನದ ಬಸವಾದಿ ಶರಣರ ಕ್ರಾಂತಿಯಲ್ಲಿ ಹಾಗೂ ಅನುಭವ ಮಂಟಪದಲ್ಲಿ ತನ್ನ ಸ್ವಂತ ಚರ್ಮದಿಂದ ಪಾದುಕೆ ನಿರ್ಮಿಸಿ ಬಸವಣ್ಣನವರಿಗೆ ನೀಡಿದ ಮಹಾಶರಣ ಹರಳಯ್ಯ ದಂಪತಿ ಪುಣ್ಯಸ್ಥಳವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ ರೂ. ಅನುದಾನ ನೀಡಿದೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿದರು. ನೀಲಹಳ್ಳಿ ಗ್ರಾಪಂ ಅಧ್ಯಕ್ಷ ಭೀಮರಾವ ವೀರಭದ್ರಪ್ಪ ಪಾಟೀಲ, ತಾಪಂ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ, ಜಿಪಂ ಸದಸ್ಯೆ ದೇವಮ್ಮ ಕರೆಪ್ಪ ಪಿಳ್ಳಿ, ತಾಪಂ ಸದಸ್ಯ ಚನ್ನಬಸಪ್ಪ ರಾಜೇಂದ್ರಪ್ಪ ಹಾಗರಗಿ, ಮುಖಂಡರಾದ ನಾಗರಾಜ ನಂದೂರಕರ, ಕಾಶೀರಾಯ ನಂದೂರಕರ, ಧೂಳಪ್ಪ ದೊಡಮನಿ, ಚನ್ನಬಸಪ್ಪ ಹಾಗರಗಿ, ಬಸವರಾಜ ಪಾಟೀಲ, ಜಿಪಂ ಇಂಜಿನಿಯರಿಂಗ್‌ ವಿಭಾಗದ ಅಧಿಧೀಕ್ಷಕ ಇಂಜಿನಿಯರ್‌ ಶಿವಶಂಕರಪ್ಪ ಗುರಗುಂಟಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next