ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷ ಸೂಚಿಸಿದವರಿಗೆ ಮತ ಹಾಕುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ಸಲ್ಲಿಕೆಗೂ ಮೊದಲು ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ಅವರು, ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಮಾಜಿ ಪ್ರಧಾನಿ ದೇವೇಗೌಡರಿಗೆ ಯಾರು ಮತ ಹಾಕಬೇಕು ಎನ್ನುವುದನ್ನು ಪಕ್ಷ ಸೂಚಿಸುತ್ತದೆ. ಇದು ಹೈ ಕಮಾಂಡ್ ಸೂಚನೆಯಾಗಿದ್ದು ಎಲ್ಲರೂ ಪಾಲಿಸುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಅವರಿಗೆ ಯಾರು ಮತ ಹಾಕಬೇಕೆಂದು ಪಕ್ಷ ಸೂಚಿಸುತ್ತದೆ ಎಂದು ಶಾಸಕರಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಶಾಸಕಾಂಗ ಸಭೆಯ ನಂತರ ವಿಧಾನಸೌಧದ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರು ಮತ್ತೊಂದು ಸಭೆ ನಡೆಸಿ, ನಾಮಪತ್ರ ಸಲ್ಲಿಕೆಗೆ ಯಾರು ಖರ್ಗೆಯವರ ಜೊತೆಯಲ್ಲಿರಬೇಕು ಎನ್ನುವುದನ್ನು ನಿರ್ಧರಿಸಿ, ನಾಮಪತ್ರದ ನಾಲ್ಕು ಪ್ರತಿಗಳನ್ನು ಮಾಡಿ, ನಾಯಕರು ಸರತಿಯಲ್ಲಿ ವಿಧಾನಸಭಾ ಕಾರ್ಯದರ್ಷಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಸಲ್ಲಿಸಿದ್ದಾರೆ.