ಲಕ್ನೋ: ಉತ್ತರಪ್ರದೇಶದ 11 ವಿಧಾನಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ(ಡಿಸೆಂಬರ್ 3, 2020) ಬೆಳಗ್ಗೆ 8ಗಂಟೆಗೆ ಬಿಗಿ ಭದ್ರತೆ ನಡುವೆ ಲಕ್ನೋದ ರಮಾಬಾಯ್ ಅಂಬೇಡ್ಕರ್ ಮೈದಾನದಲ್ಲಿ ಮತಎಣಿಕೆ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
ಹನ್ನೊಂದು ಎಂಎಲ್ ಸಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.55.47ರಷ್ಟು ಮತದಾನವಾಗಿತ್ತು. 11 ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ 199 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಮತಎಣಿಕೆ ಹಿನ್ನೆಲೆಯಲ್ಲಿ ಗಡಿಭದ್ರತಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಮತಪೆಟ್ಟಿಗೆ ಇಟ್ಟಿರುವ ಭದ್ರತಾ ಕೊಠಡಿ ಮತ್ತು ಆವರಣದ ಸುತ್ತಲೂ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಐದು ಸ್ಥಾನಕ್ಕೆ ಹಾಗೂ ಶಿಕ್ಷಕರ ಕ್ಷೇತ್ರದ ಆರು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತಎಣಿಕೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ಹೇಳಿದೆ.
ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಮತಎಣಿಕೆಗೆ 14 ಸುತ್ತು ನಡೆಯಲಿದ್ದು, ಮಧ್ಯಾಹ್ನದೊಳಗೆ 11 ಎಂಎಲ್ ಸಿ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.